ಉಡುಪಿ ಜಿಲ್ಲೆಯ ಅಂಗನವಾಡಿ ನೌಕರರಿಂದ ಪ್ರತಿಭಟನೆ

Update: 2022-01-10 12:17 GMT

ಉಡುಪಿ, ಜ.10: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌರಕರರ ಸಂಘ (ಸಿಐಟಿಯು) ಇಂದು ರಾಜ್ಯಾದ್ಯಂತ ಕರೆ ನೀಡಿರುವ ಪ್ರತಿಭಟನೆ ಉಡುಪಿ ಜಿಲ್ಲೆಯಲ್ಲೂ ಉಡುಪಿ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ತಾಲೂಕು ಕಚೇರಿಗಳ ಎದುರು ಇಂದು ನಡೆಯಿತು.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಯಿತು. ಅದೇ ರೀತಿ ಬ್ರಹ್ಮಾವರದಲ್ಲೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಮಹಿಳೆಯರ ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂಗನವಾಡಿ ಕಾರ್ಯಕರ್ತರು ಸದಾ ದುಡಿಯುತಿದ್ದಾರೆ. ಕೊರೋನ ಮುಂಚೂಣಿ ಕಾರ್ಯಕರ್ತರಾಗಿ ದುಡಿದು 59 ಮಂದಿ ಇದಕ್ಕಾಗಿ ಬಲಿದಾನ ವಾಗಿದ್ದಾರೆ. 293 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿ ಸಂಕಷ್ಟ ಅನುಭವಿಸುತಿದ್ದಾರೆ. ಹಲವರು ಕುಟುಂಬದವರನ್ನು ಕಳೆದುಕೊಂಡಿದ್ದಾರೆ.

ಕೊರೋನ ಮಧ್ಯದಲ್ಲೂ ಇ-ಸರ್ವೆ, ಚುನಾವಣೆಗಳು, ಲಸಿಕೆ ಹಾಕುವುದು ಮತ್ತು ಅದರ ಸರ್ವೆ, ಪೋಷಣೆ ಅಭಿಯಾನ, ಪೋಷಣ್ ಪಕ್ವಾಡ ಮುಂತಾದ ವುಗಳಲ್ಲಿ ಅಂಗನವಾಡಿ ನೌಕರರು ನಿರಂತರವಾಗಿ ಭಾಗವಹಿಸುತಿದ್ದಾರೆ. ಇಂದು ಪ್ರತಿಯೊಂದು ವಸ್ತು ಹಾಗೂ ಸೇವೆಗಳ ಬೆಲೆ ಹೆಚ್ಚಾದರೂ, ಅಂಗನವಾಡಿ ನೌಕರರ ಆದಾಯ ಮಾತ್ರ ಹೆಚ್ಚಳವಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಭಾರತಿ, ಕಾರ್ಯದರ್ಶಿ ಸುಶೀಲಾ ನಾಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News