ದೇವರ ಮೊರೆ ಹೋದ ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರು

Update: 2022-01-10 12:49 GMT

ಮಂಗಳೂರು, ಜ.10: ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಭದ್ರತೆ(ಸೇವಾ ವಿಲೀನತೆ) ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವರ ಮೊರೆ’ ಹೋಗುವ ವಿಭಿನ್ನ ಆಂದೋಲನ ಇಂದು ನಡೆಯಿತು.

ಕಳೆದ 30 ದಿನಗಳಿಂದ ಮುಷ್ಕರ, ಜಾಥಾ, ಪ್ರತಿಭಟನೆ, ತರಗತಿ ಬಹಿಷ್ಕಾರ ನಡೆಸಿ, ಸರ್ಕಾರವನ್ನು ಹಲವಾರು ಬಾರಿ ಒತ್ತಾಯಿಸಿದರೂ ಸ್ಪಂದನೆ ಸಿಗದ ಕಾರಣ ದ.ಕ. ಜಿಲ್ಲೆಯ ಸಮಸ್ತ ಅತಿಥಿ ಉಪನ್ಯಾಸಕರ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ನಡೆಸಲಾಯಿತು.

ತಮ್ಮ ಅಳಲನ್ನು ಸರ್ಕಾರಕ್ಕೆ ಮನದಟ್ಟು ಮಾಡುವಂತೆ ಪ್ರೇರೇಪಿಸಲು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ನಡೆಸಲಾ ಯಿತು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಸನ್ನಿಧಿ, ಬಳಿಕ ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸೇವಾ ಭದ್ರತೆ ಈಡೇರಿದ್ದಲ್ಲಿ ಹರಕೆಯ ಕೋಲ ನೀಡುವ ಸಂಕಲ್ಪವನ್ನೂ ಮಾಡಲಾಯಿತು.

ಇದೇ ವೇಳೆ ಉಳ್ಳಾಲದ ಪವಿತ್ರ ದರ್ಗಾದಲ್ಲಿ ಸೇವಭದ್ರತೆಗಾಗಿ ಪ್ರಾರ್ಥನೆ ಮಾಡಿ, ದರ್ಗಾದ ಅಧ್ಯಕ್ಷರ ಮೂಲಕ ಒತ್ತಾಯಿಸಿ ಮನವಿ ನೀಡಲಾಯಿತು. ನಂತರ ಉಳ್ಳಾಲ ರಾಣಿ ಅಬ್ಬಕ್ಕನ ಆರಾಧನೆಯ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಕೈ ಮುಗಿಯಲಾಯಿತು. ಅಲ್ಲಿಂದ ಮಂಗಳೂರಿನ ಧರ್ಮ ಪ್ರಾಂತ್ಯದ ಭಿಷಪ್ ನಿವಾಸದ ಚಾಪೆಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿನ ಸಾರ್ವಜನಿಕ ಸಂಪರ್ಕ ಅಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆಯನ್ನು ಈಡೆರಿಸುವಂತೆ ಒತ್ತಾಯಿಸಲಾಯಿತು.

ಜಿಲ್ಲಾಧ್ಯಕ್ಷ ಧೀರಜ್ ಕುಮಾರ್, ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಹೇಮಚಂದ್ರ, ವಿನೋದ, ವಸಂತ್ ಕುಮಾರ್, ಕಾರ್ಯದರ್ಶಿ ಗಳಾದ ಮಹಾಂತೇಶ್, ರಾಜೇಶ್, ಶಾಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News