ಉಡುಪಿ ಜಿಲ್ಲೆ: 219 ಮಂದಿಯಲ್ಲಿ ಕೊರೋನ ಪಾಸಿಟಿವ್

Update: 2022-01-10 15:11 GMT

ಉಡುಪಿ, ಜ.9: ಜಿಲ್ಲೆಯಲ್ಲಿ ಸೋಮವಾರ 219 ಮಂದಿಯಲ್ಲಿ ಕೊರೋನ ಸೋಂಕು ಕಂಡುಬಂದಿದೆ. ದಿನದಲ್ಲಿ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ 1158ಕ್ಕೇರಿದೆ. ದಿನದಲ್ಲಿ 40 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಪಾಸಿಟಿವ್ ಬಂದ 219 ಮಂದಿಯಲ್ಲಿ 133 ಮಂದಿ ಪುರುಷ ರಾದರೆ 86 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 183 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 14 ಮಂದಿ ಹಾಗೂ ಕಾರ್ಕಳ ತಾಲೂಕಿನ 20 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇಬ್ಬರು ಹೊರಜಿಲ್ಲೆಯವರೂ ಇಲ್ಲಿ ಪಾಸಿಟಿವ್ ಬಂದಿದ್ದಾರೆ.

ಇಂದು ಪಾಸಿಟಿವ್ ಬಂದ 219 ಮಂದಿಯಲ್ಲಿ 19 ಮಂದಿಯನ್ನು ಕೋವಿಡ್ ಕೇರ್‌ಸೆಂಟರ್‌ಗೂ, ನಾಲ್ವರನ್ನು ಕೋವಿಡ್ ಆಸ್ಪತ್ರೆಗೂ, ಮೂವರನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 193 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ರವಿವಾರ 40 ಮಂದಿ ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಜಿಲ್ಲೆಯಲ್ಲಿ ಜ.1ರಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 232ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 3302 ಮಂದಿ, ಕುಂದಾಪುರದಲ್ಲಿ 819 ಹಾಗೂ ಕಾರ್ಕಳ ತಾಲೂಕಿನ 801 ಮಂದಿ ಸೇರಿದಂತೆ ಒಟ್ಟು 4922 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 1242ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.

4003 ಮಂದಿಗೆ ಮುನ್ನೆಚ್ಚರಿಕೆ ಡೋಸ್:  ಇಂದಿನಿಂದ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾರಂಭಿಸಿದ್ದು ಮೊದಲ ದಿನದಂದು ಒಟ್ಟು 4003ಮಂದಿ ಈ ಡೋಸ್‌ನ್ನು ಪಡೆದುಕೊಂಡರು.

ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 469 ಮಂದಿ ಲಸಿಕೆ ಪಡೆದರೆ, 3050 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 484 ಮಂದಿ ಮುಂಚೂಣಿ ಕಾರ್ಯಕರ್ತರೂ ಸಹ ತಮ್ಮ ಪಾಲಿ ಕೋವಿಡ್ ಲಸಿಕೆಯನ್ನು ಪಡೆದರು.

5127 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 5127 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 2288 ಮಂದಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 3371 ಮಂದಿ ಮೊದಲ ಡೋಸ್ ಹಾಗೂ 1756 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News