ಕಾಂಗ್ರೆಸ್ ಪಾದಯಾತ್ರೆ ಕೈಬಿಡದಿದ್ದರೆ ಹೈಕೋರ್ಟ್‌ನಲ್ಲಿ ದಾವೆ: ಜೆಡಿಎಸ್

Update: 2022-01-11 13:33 GMT

ಉಡುಪಿ, ಜ.11: ಕೋವಿಡ್ ಸೋಂಕು ಮತ್ತಷ್ಟು ಹೆಚ್ಚುವ ಸಂಭವ ಇರುವು ದರಿಂದ ಕಾಂಗ್ರೆಸ್ ನಾಯಕರು ರಾಜಕೀಯ ಹಠ ಬಿಟ್ಟು ಜನಾರೋಗ್ಯಕ್ಕೆ ಅಪಾಯಕಾರಿ ಆಗಬಹುದಾದ ಪಾದಯಾತ್ರೆ ಕೈಬಿಡದಿದ್ದರೆ ಮತ್ತು ಈ ಬಗ್ಗೆ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತನೆ ಮುಂದುವರೆಸಿದರೆ ಹೈಕೋರ್ಟಿನಲ್ಲಿ ದಾವೆ ಹೂಡಲಾಗುವುದು ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಎಲ್ಲವೂ ಬಡ ಜನರಿಗೆ ಮಾತ್ರ ಸೀಮಿತವಾಗಿದೆ. ಜನ ಬಲ, ತೋಳ್ಬಲ ಉಳ್ಳವರಿಗೆ ಅಲ್ಲ ಎಂಬುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವರ್ತನೆ, ರ್ಯಾಲಿ, ಪ್ರತಿಭಟನೆ, ಪಾದಯಾತ್ರೆಳೇ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂದುವರಿದ ಭಾಗವಾಗಿ ಲಾಕ್ ಡೌನ್ ಹೇರುವ ಆತಂಕ ಉದ್ಯಮ ವಲಯವನ್ನು ಕಾಡುತ್ತಿದೆ. ತಜ್ಞರ ಜತೆ ಚರ್ಚಿಸಿ ಕೋವಿಡ್ ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಬೇಕು, ಜನರಿಗೆ ತೊಂದರೆ ಆಗದಂತೆ, ಆರ್ಥಿಕ ಸಂಕಷ್ಟದಿಂದ ಬಳಲದಂತೆ ಬಡ ಜನರ ಬದುಕಿಗೆ ಸರಕಾರ ಆರ್ಥಿಕ ನೆರವು, ಪ್ಯಾಕೇಜ್ ಘೋಷಿಸಬೇಕು. ಅದು ಬಿಟ್ಟು ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಧಿಸಬಾರದು ಎಂದು ಅವರು ಒತ್ತಾಯಿಸಿದರು.

ಪರ್ಯಾಯೋತ್ಸವಕ್ಕೆ ವೈಭದ ಸಿದ್ಧತೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಧಾರ್ಮಿಕ ಸಂಪ್ರದಾಯ ಆಚರಣೆಗೆ ಕೋವಿಡ್ ಹೆಸರಿನಲ್ಲಿ ಯಾವುದೇ ಅಡೆ ತಡೆ ಒಡ್ಡುವ ಯತ್ನ ಮಾಡಬಾರದು. ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಉಡುಪಿ ಪರ್ಯಾಯ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಅಧಿಕಾರ ನೀಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕಾಪು ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಆತ್ರಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಮುಖಂಡರಾದ ದಕ್ಷತ್ ಶೆಟ್ಟಿ, ಗಂಗಾಧರ ಬಿತಿರ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News