ಯಾತ್ರಾರ್ಥಿಗಳ ಬಸ್ ಪಲ್ಟಿ: ಆರು ಗಂಭೀರ ಸಹಿತ 21 ಮಂದಿಗೆ ಗಾಯ

Update: 2022-01-12 13:38 GMT

ಕೊಲ್ಲೂರು, ಜ.12: ಕೊಲ್ಲೂರಿಗೆ ಬರುತ್ತಿದ್ದ ಯಾತ್ರಾರ್ಥಿಗಳ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಆರು ಮಂದಿ ಗಂಭೀರ ಸೇರಿದಂತೆ ಒಟ್ಟು 21 ಮಂದಿ ಗಾಯಗೊಂಡ ಘಟನೆ ಜ.11ರಂದು ಸಂಜೆ ವೇಳೆ ಕೊಲ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿಯ ಒಣ್ಕಣ್ ಮೋರಿ ತಿರುವಿನಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಭಂಡಾರ ಹಳ್ಳಿಯಿಂದ ಜ.10ರಂದು 42 ಮಂದಿಯೊಂದಿಗೆ ಹೊರಟ ಬಸ್, ಜ.11ರಂದು ಸಿಗಂದೂರು ತಲುಪಿತು. ಮಧ್ಯಾಹ್ನ ಅಲ್ಲಿಂದ ಕೊಲ್ಲೂರು ಕಡೆಗೆ ಹೊರಟ ಬಸ್, ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿತ್ತೆನ್ನಲಾಗಿದೆ.

 ಇದರ ಪರಿಣಾಮ ಬಸ್‌ನಲ್ಲಿದ್ದ ಶ್ಯಾಮಲಮ್ಮ ಹಾಗೂ ರೂಪಮ್ಮ ಎಂಬವರ ಕೈಗಳು ತುಂಡಾಗಿದ್ದು, ಕಲಾವತಿ ಹಾಗೂ ರತ್ನ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಿ.ವಿ.ಶಂಕರ ರೆಡ್ಡಿ, ಅವರ ಪತ್ನಿ ರೆಡ್ಡಿಯಮ್ಮ, ಸಹ ಪ್ರಯಾಣಿಕರಾದ ಪಾರ್ವತಮ್ಮ, ಭಾಗ್ಯಮ್ಮ, ಶೀನಪ್ಪ, ಮಂಜುಳಮ್ಮ, ಬಿ.ಎಸ್.ರಾಮಕೃಷ್ಣ, ಸರಸ್ವತಮ್ಮ, ವೆಂಕಟರಮಣಪ್ಪ, ಪಾರ್ವತಮ್ಮ, ಬಿ.ಕೆ.ಶ್ರೀನಿವಾಸ್, ವೆಂಕಟರಾಮ, ರಾಮಕ್ಕ, ಅರುಣಮ್ಮ, ಎ.ಎನ್.ಶ್ರೀನಿವಾಸ್, ಅನಸೂಯಮ್ಮ, ತ್ರೀವೇಣಿಯಮ್ಮ, ವೆಂಕಟಲಕ್ಷ್ಮೀ, ಕೆ.ಶಂಕರಪ್ಪ, ಚಾಲಕ ಶ್ರೀನಿವಾಸ್ ಎಂಬವರು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದ ಸಹ ಪ್ರಯಾಣಿಕರಿಗೆ ಸಣ್ಣಪುಟ್ಟ ತರಚಿದ ರಕ್ತಗಾಯಗಳಾಗಿವೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News