ಕರಿಯ ಸ್ವಾಭಿಮಾನದ ಬಂಡಾಯಗಾರ ಮುಹಮ್ಮದ್ ಅಲಿ
ಬಾಕ್ಸಿಂಗ್ ದಂತಕತೆ ಎಂದೇ ಖ್ಯಾತ ಮುಹಮ್ಮದ್ ಅಲಿ, ಕರಿಯ ಸ್ವಾಭಿಮಾನದ ಬಂಡಾಯಗಾರನಾಗಿಯೂ ಹೆಸರುವಾಸಿ. ಬಾಲ್ಯದಿಂದಲೂ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿ ಅದುಮಿಟ್ಟ ಸಿಟ್ಟನ್ನು ಬಾಕ್ಸಿಂಗ್ ರಿಂಗಿನಲ್ಲಿ ಮಾತ್ರವಲ್ಲದೆ, ಜೀವನದ ಕಣದಲ್ಲೂ ಹೊರಹಾಕಿದ ಅಲಿ ಬದುಕಿದ್ದರೆ ಇಂದು-ಜನವರಿ 17ರಂದು ಅವರಿಗೆ 80 ವರ್ಷಗಳು ತುಂಬುತ್ತಿದ್ದವು. ಅವರ ಜನ್ಮದಿನದಂದು ಒಂದು ನೆನಪು.
ಜನಾಂಗೀಯ ತಾರತಮ್ಯದ ಯುಎಸ್‌ಎಯಲ್ಲಿ, ಅದರಲ್ಲೂ ಗುಲಾಮಗಿರಿಯನ್ನು ಸಮರ್ಥಿಸಲಾಗುತ್ತಿದ್ದ ದಕ್ಷಿಣದ ರಾಜ್ಯಗಳಲ್ಲಿ ಒಂದರಲ್ಲಿ ಹುಟ್ಟಿ ಬೆಳೆದ ಕರಿಯ ಹುಡುಗನೊಬ್ಬ ತನ್ನ ಒಳಗೆ ಅದುಮಿಟ್ಟುಕೊಂಡಿದ್ದ ಸಿಟ್ಟು ಸೆಡವುಗಳನ್ನೇ ಹತ್ಯಾರ ಮಾಡಿಕೊಂಡು ಜಗದ್ವಿಖ್ಯಾತ ದಂತಕತೆಯಾದ ಕತೆಯಿದು. ಅವರ ಸುತ್ತ ಹುಟ್ಟಿಕೊಂಡ ದಂತಕತೆಗಳಿಗೆ ಲೆಕ್ಕವಿಲ್ಲ. ಇಂತಹ ಒಂದು ದಂತಕತೆಯಿಂದಲೇ ಆರಂಭಿಸೋಣ.
► ಆರಂಭಿಕ ಜೀವನ
ಯುಎಸ್‌ಎಯ ದಕ್ಷಿಣದ ರಾಜ್ಯಗಳಲ್ಲಿ ಒಂದಾಗಿರುವ ಕೆಂಟುಕಿಯ ಲೂಯಿಸ್ವಿಲ್ಲೆ ಎಂಬಲ್ಲಿ ಜನವರಿ 17,1942 ರಲ್ಲಿ ಹುಟ್ಟಿದ ಮುಹಮ್ಮದ್ ಅಲಿಯ ಮೊದಲ ಹೆಸರು ಕ್ಯಾಸಿಯಸ್ ಮಾರ್ಸಿಲಸ್ ಕ್ಲೇ. ಧರ್ಮದಲ್ಲಿ ಕ್ರೈಸ್ತ. ಬಾಲ್ಯದಲ್ಲಿಯೇ ತಾನು ಯಾರಿಗೂ ಹೆದರಿ ಬದುಕುವ ಜನ ಅಲ್ಲ ಎಂದು ತೋರಿಸಿಕೊಟ್ಪಿದ್ದ ಕ್ಲೇಗೆ ಬಿಳಿಯ ಹುಡುಗರೊಂದಿಗೆ ಬೀದಿ ಹೊಡೆದಾಟಗಳು ಮಾಮೂಲಿಯಾಗಿದ್ದವು. ಯಾಕೆಂದರೆ, ಜನಾಂಗೀಯ ತಾರತಮ್ಯ, ಅವಹೇಳನಗಳು ನಿತ್ಯದ ಪಾಡಾಗಿದ್ದವು.
ಆತ ಬಾಕ್ಸಿಂಗ್ ಕ್ಷೇತ್ರದಲ್ಲಿ ಕಾಲಿಟ್ಟ ಕತೆ ಕುತೂಹಲಕಾರಿಯಾಗಿದೆ. 12 ವರ್ಷದ ಹುಡುಗ ಕ್ಲೇಯ ಸೈಕಲನ್ನು ಯಾರೋ ಕದ್ದರು. ಅಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಜೋ ಮಾರ್ಟಿನ್ ಎಂಬವರ ಬಳಿಗೆ ನೇರ ನಡೆದ ಕ್ಲೇ, ನನಗೆ ಕಳ್ಳನನ್ನು ಹುಡುಕಿಕೊಡಿ. ನನಗೆ ಅವನನ್ನು ಹಿಡಿದು ಚೆನ್ನಾಗಿ ಚಚ್ಚಬೇಕು ಎಂದನಂತೆ. ಅದಕ್ಕೆ ಅವರು, ಸರಿ. ಆದರೆ, ನೀನು ಜನರಿಗೆ ಸವಾಲು ಹಾಕುವುದಕ್ಕೂ ಮೊದಲು ಹೊಡೆದಾಡುವುದು ಹೇಗೆ ಎಂದು ಕಲಿಯಬೇಕಲ್ಲ! ಎಂದರಂತೆ. ಹುಡುಗ ಆಯಿತು ಎಂದ. ಈ ಪೊಲೀಸ್ ಅಧಿಕಾರಿ ಚಿಕ್ಕ ಹುಡುಗರಿಗೆ ಸ್ಥಳೀಯ ಜಿಮ್‌ನಲ್ಲಿ ಬಾಕ್ಸಿಂಗ್ ಕಲಿಸುತ್ತಿದ್ದ ಗುರುವೂ ಆಗಿದ್ದುದು ಕ್ಲೇಯ ಅದೃಷ್ಟ.
ಮೀನನ್ನು ನೀರಿಗೆ ಎಸೆದಂತಾಯಿತು. 1954ರಲ್ಲಿ ಮೊದಲ ಹವ್ಯಾಸಿ ಕಾದಾಟದಲ್ಲಿ ಕ್ಲೇಗೆ ಕೂದಲೆಳೆಯ ಅಂತರದ ಜಯ ಒಲಿದು ಬಂತು. ನಂತರ ಆತ ಹಿಂದೆ ತಿರುಗಿ ನೋಡಿದ್ದಿಲ್ಲ. 1956ರಲ್ಲಿ ಆತ ಹೊಸ ಹುಡುಗರಿಗಾಗಿ ನಡೆಯುತ್ತಿದ್ದ ಗೋಲ್ಡನ್ ಗ್ಲೋವ್ಸ್ ಪಂದ್ಯಾವಳಿಯಲ್ಲಿ ಲೈಟ್ ಹೆವಿವೇಯ್ಟಾ ಚಾಂಪಿಯನ್ ಆದ. ಮೂರು ವರ್ಷಗಳ ನಂತರ ರಾಷ್ಟ್ರೀಯ ಮಟ್ಟದ ಗೋಲ್ಡನ್ ಗ್ಲೋವ್ಸ್ ಗೆದ್ದ. ಅದೇ ವಿಭಾಗದಲ್ಲಿ ಅಮೆಚೂರ್ ಅತ್ಲೆಟಿಕ್ಸ್ ಯೂನಿಯನ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಕೂಡಾ ಗೆದ್ದ.
► ನದಿಗೆಸೆದ ಒಲಿಂಪಿಕ್ಸ್ ಚಿನ್ನ
1960ರಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಆರಡಿ ಮೂರಿಂಚು ಎತ್ತರದ ಈ ಹುಡುಗ ಇಡೀ ದೇಶದಲ್ಲಿ ಹೀರೊ ಆಗಿಬಿಟ್ಟ. ಆತನ ಮಿಂಚಿನ ಹೊಡೆತ ಮತ್ತು ಚುರುಕಿನ ಕಾಲ್ಚಲನೆ ಎಲ್ಲರ ಗಮನ ಸೆಳೆಯಿತು. ಈ ಪದಕ ಆತನ ಸ್ವಾಭಿಮಾನವನ್ನು ಇನ್ನೂ ಎತ್ತರಕ್ಕೆ ಒಯ್ದಿತು. ಆದರೆ, ಜನಾಂಗೀಯ ದ್ವೇಷವನ್ನು ಉಸಿರಾಡುತ್ತಿದ್ದ ಜನರಿಗೆ ಇಷ್ಟು ಸಾಕಾಗಿರಲಿಲ್ಲ. ಈ ಕುರಿತು ಕೂಡಾ ಒಂದು ದಂತಕತೆಯಿದೆ.
ಕ್ಯಾಸಿಯಸ್ ಕ್ಲೇ ಈ ಪದಕವನ್ನು ಯಾವಾಗಲೂ ಕೊರಳಲ್ಲಿ ಧರಿಸಿಕೊಂಡು ತಿರುಗಾಡುತ್ತಿದ್ದರು. ಸಿಕ್ಕಸಿಕ್ಕವರಿಗೆ ಅದನ್ನು ತೋರಿಸುತ್ತಿದ್ದರು. ಒಂದು ದಿನ ತನ್ನ ಗೆಳೆಯನ ಜೊತೆಗೆ ಒಂದು ಬಾರ್‌ಗೆ ಹೋದಾಗ ಜನಾಂಗೀಯ ಅವಮಾನ ಅಲ್ಲಿಯೂ ಕಾಡಿತು. ಅವರ ಬಣ್ಣದ ಕಾರಣದಿಂದ ಅವರನ್ನು ಕೆಲವು ಬಿಳಿಯ ಗೂಂಡಾಗಳು ಅವಮಾನಿಸಿ ಹೊರಗೆ ಹೋಗಲು ಹೇಳಿದರು. ನಾನು ನಮ್ಮ ದೇಶಕ್ಕೆ ಒಲಿಂಪಿಕ್ಸ್ ಚಿನ್ನದ ಪದಕ ತಂದುಕೊಟ್ಟವನು ಎಂದು ಕುತ್ತಿಗೆಯಲ್ಲಿದ್ದ ಪದಕ ತೋರಿಸಿದರೂ ಪ್ರಯೋಜನವಾಗಲಿಲ್ಲ. ನಾನೂ ನಿಮ್ಮಂತೆಯೇ ಒಬ್ಬ ಕ್ರೈಸ್ತ ಎಂದು ಹೇಳಿದರೂ ಪ್ರಯೋಜನವಾಗಲಿಲ್ಲ. ಗಲಾಟೆ ನಡೆದು, ಎಲ್ಲರೂ ಸೇರಿ ಕ್ಲೇ ಮತ್ತು ಗೆಳೆಯನಿಗೆ ಹಿಗ್ಗಾಮುಗ್ಗಾ ಹೊಡೆದರು.
ತನ್ನ ದೇಶವಾಗಲೀ, ಧರ್ಮವಾಗಲೀ ತನಗೆ ಯಾವುದೇ ಮರ್ಯಾದೆ ದೊರಕಿಸಿಕೊಡಲಿಲ್ಲ ಎಂದು ನೊಂದುಕೊಂಡು ಬಾರ್‌ನಿಂದ ಹೊರಬಂದು ಹತಾಶರಾಗಿ ನಡೆಯುತ್ತಿದ್ದಾಗ, ಒಂದು ಸೇತುವೆಯ ಮೇಲೆ ನಿಂತು ನದಿಯನ್ನೇ ದಿಟ್ಟಿಸಿದರು. ಕೊರಳಲ್ಲಿದ್ದ ಚಿನ್ನದ ಪದಕವನ್ನು ತೆಗೆದು ನದಿಗೆಸೆದರಂತೆ. ದೇಶಕ್ಕಾಗಿ ಮುಂದೆ ಸ್ಪರ್ಧಿಸದಿರುವ, ಕೆಲವರ್ಷಗಳ ನಂತರ ತನ್ನ ಧರ್ಮ ಬದಲಿಸಿ ಇಸ್ಲಾಂ ಸ್ವೀಕರಿಸುವ ನಿರ್ಧಾರವನ್ನು ಅವರು ಅಂದೇ ಮಾಡಿರಬಹುದು. ಅವರು ವೃತ್ತಿಪರ ಬಾಕ್ಸಿಂಗ್ ಸೇರಿ ಹಣ ಮಾಡುವ ನಿರ್ಧಾರ ಮಾಡಿದರು. ಹಣ ಬಂದರೆ ಮರ್ಯಾದೆ ತಾನಾಗಿಯೇ ಬರುತ್ತದೆ ಎಂಬ ಯೋಚನೆ ಇದ್ದಿರಲೂ ಸಾಕು. ಹಾಗೆಯೇ ಆಯಿತು. ಅವರು ಮುಂದಿನ ವರ್ಷಗಳಲ್ಲಿ ಅತ್ಯಂತ ಶ್ರೀಮಂತರೂ ಆದರು. ಆದರೆ, ವೃತ್ತಿಪರ ಬಾಕ್ಸರ್‌ಗಳಿಗೆ ದೇಶಕ್ಕಾಗಿ ಆಡುವ ಅವಕಾಶ ಇಲ್ಲ.1964ಲ್ಲಿ ಅವರು ಕರಿಯ ಮುಸ್ಲಿಂ ಗುಂಪೊಂದನ್ನು ಸೇರಿಕೊಂಡರು. ಮೊದಲಿಗೆ ತನ್ನ ಹೆಸರನ್ನು ಕ್ಯಾಸಿಯಸ್ ಎಕ್ಸ್ ಎಂದು ಇಟ್ಟುಕೊಂಡ ಅವರು, ನಂತರ ಮುಹಮ್ಮದ್ ಅಲಿ ಎಂದು ಬದಲಿಸಿಕೊಂಡರು. 1970ರ ದಶಕದ ಆರಂಭದಲ್ಲಿ ಅಧಿಕೃತವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.
► ಸಾರ್ವಕಾಲಿಕ ಸರ್ವಶ್ರೇಷ್ಠ ಬಾಕ್ಸರ್
ಮುಹಮ್ಮದ್ ಅಲಿಯವರನ್ನು ಎಲ್ಲಾ ಕಾಲದ ಸರ್ವಶ್ರೇಷ್ಠ ಬಾಕ್ಸರ್‌ಗಳಲ್ಲಿ ಒಬ್ಬರೆಂದು ಕರೆಯಲಾಗುತ್ತದೆ. ಅದಕ್ಕೆ ತಕ್ಕಂತೆ ಪ್ರಸಿದ್ಧ ಸ್ಪೋರ್ಟ್ಸ್ ಇಲ್‌ಸ್ಟ್ರೇಟೆಡ್ ಪತ್ರಿಕೆ 1999ರಲ್ಲಿ ಅವರನ್ನು 20ನೇ ಶತಮಾನದ ಶ್ರೇಷ್ಠ ಕ್ರೀಡಾಳು ಎಂದು ಹೆಸರಿಸಿತ್ತು. ಬಿಬಿಸಿ ಕೂಡಾ ಶತಮಾನದ ಕ್ರೀಡಾ ವ್ಯಕ್ತಿತ್ವ ಎಂದು ಬಣ್ಣಿಸಿತ್ತು. ಬ್ರಿಟಿಷ್ ಚಾಂಪಿಯನ್ ಹೆನ್ರಿ ಕೂಪರ್ ಮತ್ತು ಸೋನಿ ಲಿಸ್ಟರ್‌ನಂತಹ ಮಹಾನ್ ಬಾಕ್ಸರ್‌ಗಳನ್ನು ಸೋಲಿಸಿ 1964ರಲ್ಲಿ ವಿಶ್ವ ಹೆವಿವೇಯ್ಟಿ ಚಾಂಪಿಯನ್ ಆದ ಅಲಿ, ನಂತರ ಮೂರು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾದರೂ ನಂತರ 70ರ ದಶಕದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆದರು. ಈ ದಾರಿಯಲ್ಲಿ ಆವರು ಹೆಸರಾಂತ ಬಾಕ್ಸರ್‌ಗಳಾದ ಜೋ ಫ್ರೇಜಿಯರ್ ಮತ್ತು ಜಾರ್ಜ್ ಫೋರ್ಮನರನ್ನು ಮಣಿಸಿದ್ದರು. 1981ರಲ್ಲಿ ತನ್ನ 39ನೇ ವಯಸ್ಸಿನಲ್ಲಿ ಬಾಕ್ಸಿಂಗ್‌ಗೆ ವಿದಾಯ ಹೇಳಿದ ಅಲಿ, 56 ಜಯ, ಐದು ಸೋಲುಗಳನ್ನು ಕಂಡರು. ಅವರ ಜಯಗಳಲ್ಲಿ 37 ನಾಕೌಟ್‌ಗಳಿಂದಲೇ ಬಂದಿರುವುದು ಅವರ ಹೆಗ್ಗಳಿಕೆ.
ಅವರ ಸೋಲುಗಳು ಹೆಚ್ಚಾಗಿ ಬಾಕ್ಸಿಂಗ್ ಜೀವನದ ಕೊನೆಯ ಹಂತದಲ್ಲಿ ಮತ್ತು ನಿವೃತ್ತಿ ನಂತರ ಮತ್ತೆ ರಿಂಗಿಗೆ ಮರಳುವ ಪ್ರಯತ್ನದಲ್ಲಿ ಬಂದಂತಹವುಗಳು. 1971ರಲ್ಲಿ ಜೋ ಫ್ರೇಜಿಯರ್ ಜೊತೆಗಿನ ಶತಮಾನದ ಕಾದಾಟದಲ್ಲಿ 15ನೇ ಸುತ್ತಿನ ನಂತರ ಅಂಕಗಳ ಆಧಾರದಲ್ಲಿ ಅಲಿಗೆ 31 ಸತತ ಗೆಲುವಿನ ಬಳಿಕ ಮೊದಲ ಸೋಲು ಉಂಟಾಯಿತು. ನಂತರ ಕೆನ್ ನೋರ್ಟನ್ ಎದುರು ಸೋತ ಬಳಿಕ ಅಲಿ ಎರಡು ಮರು ಪಂದ್ಯಗಳಲ್ಲಿ ಫ್ರೇಜಿ ಯರರನ್ನು ಸೋಲಿಸಿದರು. ಇದು ಅವರ ಪ್ರತಿಹೋರಾಟದ ಛಲಕ್ಕೆ ಸಾಕ್ಷಿ.
1974ರಲ್ಲಿ ಅವರು ಆ ತನಕ ಯಾರ ಎದುರೂ ಸೋಲದೇ ಇದ್ದ ತನಗಿಂತ ಎಳೆಯ ಬಾಕ್ಸರ್ ಜಾರ್ಜ್ ಫೋರ್ಮನರನ್ನು ಎಂಟನೇ ಸುತ್ತಿನಲ್ಲಿಯೇ ನಾಕೌಟ್ ಮಾಡಿ ತನ್ನನ್ನು ಮತ್ತೆ ಸಾಬೀತುಗೊಳಿಸಿದರು. 1978ರಲ್ಲಿ ಲಿಯೋನ್ ಸ್ಪಿಂಕ್ಸ್ ಎದುರು ಸೋತ ಕೆಲವೇ ತಿಂಗಳುಗಳಲ್ಲಿ ನಡೆದ ಮರು ಕಾದಾಟದಲ್ಲಿ ಸ್ಪಿಂಕ್ಸ್‌ರನ್ನು ಮಣಿಸಿ ವಿಶ್ವ ಹೆವಿವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮೂರು ಬಾರಿ ಗೆದ್ದ ಮೊದಲ ಬಾಕ್ಸರ್ ಎನಿಸಿದರು. ಕೆಲಕಾಲದ ನಿವೃತ್ತಿಯಿಂದ ಮರಳಿದ ಅಲಿ, 1980ರಲ್ಲಿ ತನಗಿಂತ ಕಿರಿಯ ಲ್ಯಾರಿ ಹೋಮ್ಸ್ ಎದುರು ಸೋತರು. 1981ರಲ್ಲಿ ಟ್ರೆವರ್ ಬರ್ಬಿಕ್ ವಿರುದ್ಧ ಕೊನೆಯ ಸೋಲಿನ ಬಳಿಕ ಸಂಪೂರ್ಣವಾಗಿ ನಿವೃತ್ತಿ ಹೊಂದಿದರು.
► ಉಗ್ರ ಸ್ವಾಭಿಮಾನಿ ಅಲಿ
ಅಲಿಯವರ ಒಂದು ಸ್ವಭಾವವೆಂದರೆ, ತನ್ನನ್ನು ತಾನೇ ಹೊಗಳಿಕೊಳ್ಳುವುದು ಮತ್ತು ಎದುರಾಳಿಯನ್ನು ಹೀಯಾಳಿಸುವುದು. ಇದಕ್ಕಾಗಿ ಕೆಲವರು ಅಲಿಗೆ ಅಹಂಕಾರಿ ಎಂಬ ಪಟ್ಟ ಕೂಡ ಕಟ್ಟಿದ್ದರು. ಯಾವತ್ತೂ ಅವಹೇಳನಕ್ಕೆ ಗುರಿಯಾಗಿ, ಬಳಿಕ ಆಗಾಧ ಸಾಧನೆ ಮಾಡಿದವರಲ್ಲಿ ಈ ಸ್ವಭಾವ ಸಹಜವೇನೋ! ಆದರೆ, ಈ ಹೊಗಳಿಕೆಗಳು ಹೆಚ್ಚಿನ ಸಲ ನಿಜವಾಗುತ್ತಿದ್ದುದರ ಜೊತೆಗೆ ಕಲಾತ್ಮಕವೂ, ರಂಜನೀಯವೂ ಆಗಿರುತ್ತಿದ್ದವು. ತನ್ನನ್ನು ತಾನೇ ಸರ್ವಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದ ಅವರು, ಬಾಕ್ಸಿಂಗ್ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಪ್ರಸಿದ್ಧ. "Float like a butterfly and sting like a bee. ‘ಬಾಕ್ಸಿಂಗ್ ರಿಂಗಿನಲ್ಲಿ ಚಿಟ್ಟೆಯಂತೆ ತೇಲಾಡಿ, ಜೇನುನೊಣದಂತೆ ಕಚ್ಚಿ! ಇಂತಹ ಅನೇಕ ಮಾತುಗಳು ಇಂದೂ ಜನಜನಿತ.
ಹಠಮಾರಿತನ, ಸ್ವಾಭಿಮಾನಕ್ಕೆ ಅಲಿ ಇನ್ನೊಂದುಹೆಸರು. ಅವರ ಮಕ್ಕಳ ಪೈಕಿ ಲೈಲಾ ಅಲಿ ಮಾತ್ರ ಬಾಕ್ಸಿಂಗ್‌ನಲ್ಲಿ ಹೆಚ್ಚಿನ ಹೆಸರು ಪಡೆದರು.
► ಛಲ ಬಿಡದ ಅಪ್ರತಿಮ ಹೋರಾಟಗಾರ
ಸ್ವಾಭಿಮಾನ ಉಳ್ಳ ಸಾಮಾಜಿಕ ಹೋರಾಟಗಾರನಾಗಿ ಮುಹಮ್ಮದ್ ಅಲಿ ಗಮನ ಸೆಳೆದದ್ದು ಯುಎಸ್‌ಎಯ ವಿಯೆಟ್ನಾಂ ಯುದ್ಧವನ್ನು ವಿರೋಧಿಸಿದ ಸಮಯದಲ್ಲಿ. ಸರಕಾರದ ನಿಲುವುಗಳನ್ನು ವಿರೋಧಿಸುವವರಿಗೆ ದೇಶದ್ರೋಹಿ ಪಟ್ಟಕಟ್ಟಿ ಜೈಲಿಗೆ ತಳ್ಳುವುದು ಈಗ ನಮ್ಮ ದೇಶದಲ್ಲಿ ನಡೆಯುತ್ತಿದೆ.ಅಲಿಯವರಿಗೆ ತುಂಬಾ ಹಿಂದೆಯೇ ಈ ಅನುಭವ ಆಗಿತ್ತು.
1967ರ ಎಪ್ರಿಲ್‌ನಲ್ಲಿ ಅವರನ್ನು ಕಡ್ಡಾಯವಾಗಿ ಸೇನೆ ಸೇರುವಂತೆ ಆಯ್ಕೆ ಮಾಡಲಾಗಿತ್ತು. ಆದರೆ ಅವರದನ್ನು ನಿರಾಕರಿಸಿ ವಿಯೆಟ್ನಾಂ ಯುದ್ಧವನ್ನು ಬಿಚ್ಚು ಮಾತುಗಳಲ್ಲಿ ವಿರೋಧಿಸಿದ್ದರು. ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿತ್ತು. ತಕ್ಷಣವೇ ಅವರ ಬಾಕ್ಸಿಂಗ್ ಲೈಸನ್ಸನ್ನು ರದ್ದು ಮಾಡ ಲಾಗಿತ್ತು. ಅಮೆರಿಕನ್ ಪತ್ರಿಕೆಗಳು ಅವರ ವಿರುದ್ಧ ಸಾಕಷ್ಟು ಬರೆದವು. ಆದರೆ, ಅವರ ಜನಪ್ರಿಯತೆ ಇನ್ನೂ ಹೆಚ್ಚಾಯಿತು. 1967ರ ಜೂನ್‌ನಲ್ಲಿ ಅವರಿಗೆ ಐದು ವರ್ಷಗಳ ಸಜೆಯನ್ನು ನೀಡಲಾಯಿತು. ಆದರೆ, ಅಪೀಲಿನ ಅವಧಿಯಲ್ಲಿ ಅವರು ಜೈಲಿಗೆ ಹೋಗಬೇಕಾಗಿರಲಿಲ್ಲ. ತನ್ನ ಯೌವನದ ಉತ್ತುಂಗದಲ್ಲಿ ಮೂರು ವರ್ಷಗಳ ಕಾಲ ಬಾಕ್ಸಿಂಗ್ ಮಾಡಲಾಗದೆ ಹಣಕಾಸು ನಷ್ಟ ಅನುಭವಿಸಬೇಕಾಯಿತು. ಆದರೂ ಅವರು ಜಗ್ಗಲಿಲ್ಲ. ಕೊನೆಗೆ 1971ರ ಜೂನ್‌ನಲ್ಲಿ ಸುಪ್ರೀಂ ಕೋರ್ಟು ಅವರ ಸಜೆಯನ್ನು ರದ್ದುಪಡಿಸಿತು. ಈ ಕೆಲಸವಿಲ್ಲದ ಸಮಯವನ್ನು ಅವರು ಯುದ್ಧವಿರೋಧಿ ಹೋರಾಟ ಮತ್ತು ಕರಿಯರ ಸ್ವಾಭಿಮಾನದ ಹೋರಾಟಕ್ಕೆ ಬಳಸಿಕೊಂಡು, ಕಾಲೇಜು ಮತ್ತಿತರ ಕಡೆ ತಿರುಗಾಡಿ ಪ್ರಚಾರ ಮಾಡಿದರು.
ನಿವೃತ್ತಿಯ ಬಳಿಕ ಕಾದಾಟಗಳ ವೇಳೆ ತಲೆಗಾದ ಆಘಾತಗಳಿಂದಲೋ ಎಂಬಂತೆ 1984ರಲ್ಲಿ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಕಾಣಿಸಿಕೊಂಡಿತು. ಆ ಬಳಿಕ ಅವರ ಸ್ವಭಾವ ಬಹುತೇಕ ಬದಲಾಯಿತು. ಅವರು ಹೆಚ್ಚು ಹೆಚ್ಚಾಗಿ ಜನಸೇವೆ ಮತ್ತು ದಾನಧರ್ಮದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2005ರಲ್ಲಿ ಅವರ ಹೆಸರಿನಲ್ಲಿ 60 ಮಿಲಿಯನ್ ಡಾಲರ್‌ಗಳ ಲಾಭರಹಿತ ನೆರವು ನಿಧಿಯೊಂದನ್ನು ಸ್ಥಾಪಿಸಲಾಯಿತು. 2007ರಲ್ಲಿ ಪ್ರಸಿದ್ಧ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ಕೂಡಾ ನೀಡಿದೆ. ಅವರ ಎಲ್ಲಾ ಸಾಧನೆಗಳು ಹಿಂದೊಮ್ಮೆ ದೇಶದ್ರೋಹದ ಆರೋಪ ಹೊತ್ತಿದ್ದ ಅವರಿಗೆ 2001 ಮತ್ತು 2005ರಲ್ಲಿ ಅಧ್ಯಕ್ಷೀಯ ಪದಕ ದೊರಕಿಸಿಕೊಟ್ಟಿವೆ.
ದಿ ಗ್ರೇಟೆಸ್ಟ್: ಮೈ ಓನ್ ಸ್ಟೋರಿ ಮತ್ತು ಸೌಲ್ ಆಫ್ ಬಟರ್ ಫ್ಲೈ ಎಂಬ ಆತ್ಮಕತೆಗಳಲ್ಲಿ ಅವರು ತನ್ನ ಜೀವನದ ಕುರಿತು ಬರೆದಿದ್ದಾರೆ. ಅವರು ಅಲ್ಲಿ ಹೇಳಿರುವ ಮಾತೊಂದು ಮಾರ್ಮಿಕವಾಗಿದೆ. ನಾನು ನನ್ನನ್ನು ಅತ್ಯಂತ ಮಹಾನ್ ಎಂದಷ್ಟೇ ಹೇಳಿಕೊಂಡೆ. ಬುದ್ಧಿವಂತ ಎಂದಲ್ಲ! ಎದುರಾಳಿಗಳ ಮೇಲೆ ಮಾನಸಿಕ ಒತ್ತಡ ಹಾಕಲು ಇದು ಅಗತ್ಯವಾಗಿತ್ತು ಎಂಬುದು ಅವರ ವಾದ. ಅಲಿ ಕುರಿತು ಹಲವಾರು ಚಿತ್ರಗಳು, ಸಾಕ್ಷ್ಯಚಿತ್ರಗಳು ಬಂದಿವೆ. ಅವುಗಳಲ್ಲೊಂದರಲ್ಲಿ ಪ್ರಸಿದ್ಧ ನಟ ವಿಲ್ ಸ್ಮಿತ್ ನಟಿಸಿದ್ದಾರೆ. ಅವರ ನೆನಪಿಗಾಗಿ ನಾಣ್ಯವೊಂದನ್ನೂ ಬಿಡುಗಡೆ ಮಾಡಲಾಗಿದೆ. ಅವರು ಜೂನ್ 3,2016ರಲ್ಲಿ ನಿಧನರಾದರು.
ಧರ್ಮ ಮತ್ತು ಜನಾಂಗೀಯ ದ್ವೇಷಗಳು ಎಷ್ಟು ಆಳವಾಗಿ ಬೇರುಬಿಟ್ಟಿರುತ್ತವೆ ಮತ್ತು ಅವುಗಳನ್ನು ಎಷ್ಟು ವ್ಯವಸ್ಥಿತವಾಗಿ ಬೆಳೆಸಲಾಗುತ್ತದೆ, ಅವುಗಳ ವಿರುದ್ಧದ ಹೋರಾಟ ಅದೆಷ್ಟು ಕಷ್ಟ ಎಂಬುದಕ್ಕೆ ಒಂದು ಮುಹಮ್ಮದ್ ಅಲಿ ಉದಾಹರಣೆ ನೀಡಬಹುದು. ಅವರ ನಿವೃತ್ತಿಗೆ ಸ್ವಲ್ಪ ಮೊದಲು ಅಷ್ಟೊಂದು ಖ್ಯಾತಿಯ ನಂತರವೂ ಅವರು ಹುಟ್ಟಿದ ಲೂಯಿಸ್ವಿಲ್ಲೆಯ ರಸ್ತೆಯೊಂದಕ್ಕೆ ಮುಹಮ್ಮದ್ ಅಲಿ ರಸ್ತೆ ಎಂದು ಹೆಸರಿಡಲು ನಿರ್ಧರಿಸಿದಾಗ ನಗರ ಸಭೆಯ ಒಂಭತ್ತು ಸದಸ್ಯರಲ್ಲಿ ನಾಲ್ವರು ಅದನ್ನು ವಿರೋಧಿಸಿದರು. ನಂತರ ಅವರ ಹೆಸರಿದ್ದ ರಸ್ತೆ ಫಲಕಗಳನ್ನು ಕಿಡಿಗೇಡಿಗಳು ಕಿತ್ತೆಸೆದರು. ಇದೀಗ ರಸ್ತೆಯ ಹೆಸರನ್ನೂ, ಅವರನ್ನೂ ಜನರು ಸ್ವೀಕರಿಸಿದ್ದಾರೆ.
ಈಗ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಬಹಳಷ್ಟು ಕಡಿಮೆಯಾಗಿದೆ. ಕರಿಯರೂ ಬಿಳಿಯರೂ ಜೊತೆಯಾಗಿಯೇ ಹೋರಾಟ ನಡೆಸುತ್ತಿದ್ದಾರೆ. ಜನರ ಮಾನಸಿಕತೆಯ ಮೇಲೆ ಪ್ರಭಾವ ಬೀರಿ ಇದನ್ನು ಸಾಧ್ಯವಾಗಿಸಿದವರಲ್ಲಿ ಒಬ್ಬರೆಂದು ಇತಿಹಾಸ ಮುಹಮ್ಮದ್ ಅಲಿಯವರನ್ನು ನೆನಪಿಸಿಕೊಳ್ಳುತ್ತಿದೆ.
/*****************************/
ಮುಹಮ್ಮದ್ ಅಲಿಯವರ ಪ್ರತಿಭೆ ಕೇವಲ ಬಾಕ್ಸಿಂಗ್ ರಿಂಗ್‌ಗೆ ಸೀಮಿತವಾಗಿರಲಿಲ್ಲ. ಅವರು ಬಹಳ ಆಳವಾಗಿ ಯೋಚಿಸುತ್ತಿದ್ದರು ಹಾಗೂ ಕ್ರೀಡಾಳುಗಳಲ್ಲಿ ಅಪರೂಪವಾಗಿರುವ ತೀಕ್ಷ್ಮನಾಲಗೆಯನ್ನೂ ಹೊಂದಿದ್ದರು. ಅವರ ಕೆಲವು ಸ್ಫೂರ್ತಿದಾಯಕ ಹಾಗೂ ಎಂದೆಂದಿಗೂ ಸ್ಮರಣೀಯ ಮಾತುಗಳು ಇಲ್ಲಿವೆ.
► ಪ್ರಮಾದಗಳ ಬಗ್ಗೆ ತಲೆ ಕೆಡಿಸಿಕೊಂಡು ಕೂರುವುದು ಅತಿ ದೊಡ್ಡ ಪ್ರಮಾದವಾಗಿದೆ.
► ನಿಮ್ಮ ಕನಸುಗಳು ನನಸಾಗಬೇಕೇ? ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಳ್ಳೆಯ ಉತ್ತರ ಹೊಳೆಯದಿದ್ದರೆ ಮೌನವೇ ಬಂಗಾರ.
► ನೀವು ಸರಿಯಾದುದನ್ನು ಮಾಡಿದರೆ ಯಾರಿಗೂ ನೆನಪಿರುವುದಿಲ್ಲ. ನೀವು ತಪ್ಪು ಮಾಡಿದರೆ ಮಾತ್ರ ಯಾರೂ ಮರೆಯುವುದಿಲ್ಲ.
► ಇದು (ಪಾರ್ಕಿನ್‌ಸನ್) ನನ್ನ ಬದುಕಿನ ಅತ್ಯಂತ ಕಠಿಣ ಹೋರಾಟವಾಗಿದೆ. ಇದರಲ್ಲಿ ಸಂಕಟವೇನೂ ಇಲ್ಲ. ನಾನು ಪ್ರಾರ್ಥನೆ ಸಲ್ಲಿಸುತ್ತಿದ್ದೇನೆಯೇ ಮತ್ತು ನಾನು ನನ್ನ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆಯೇ ಎಂಬ ಪರೀಕ್ಷೆ ಇದು. ಎಲ್ಲ ಮಹಾನ್ ಚೇತನಗಳನ್ನು ದೇವರು ಪರೀಕ್ಷಿಸಿದ್ದಾನೆ. ದೇವರ ಯೋಜನೆಯಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಆದರೆ ಆ ಯೋಜನೆಯ ಜೊತೆಗೆ ನಾನು ಬದುಕಬೇಕಾಗಿದೆ ಎಂಬುದು ಮಾತ್ರ ನನಗೆ ತಿಳಿದಿದೆ.
► ಮಹಾನ್ ಎನಿಸಿಕೊಂಡ ಯಾವ ವ್ಯಕ್ತಿಗಳೂ ಕೇವಲ ತಮ್ಮ ಸ್ವಂತಕ್ಕಾಗಿ ಮಹಾನ್ ಎನಿಸಿಕೊಳ್ಳಲಿಲ್ಲ. ಅವರೆಲ್ಲಾ ಇತರರಿಗೆ ಹಿತವನ್ನು ಮಾಡಲು ಹೊರಟವರು ಮತ್ತು ದೇವರ ಸಾಮೀಪ್ಯ ಬಯಸಿದವರು.
► ನಾನೇ ನಂಬರ್ ವನ್, ನೀನಲ್ಲ, ಎಂಬುದನ್ನು ನನಗೆ ನೆನಪಿಸಲಿಕ್ಕಾಗಿ ದೇವರು ನನಗೆ ಈ (ಪಾರ್ಕಿನ್ ಸನ್) ರೋಗವನ್ನು ನೀಡಿದ್ದಾನೆ.
► ಜನ ಸೇವೆ ಎಂಬುದು ದೇವರು ನಮಗೆ ನೀಡಿರುವ ಭೂಮಿ ಎಂಬ ಕೋಣೆಗೆ ನಾವು ಸಲ್ಲಿಸುವ ಬಾಡಿಗೆ.
► ಒಬ್ಬ ವ್ಯಕ್ತಿ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಜಗತ್ತನ್ನು ನೋಡುವ ದೃಷ್ಟಿಕೋನ ಮತ್ತು ಅವನು ತನ್ನ ಐವತ್ತನೇ ವಯಸ್ಸಿನಲ್ಲಿ ಜಗತ್ತನ್ನು ನೋಡುವ ದೃಷ್ಟಿಕೋನದಲ್ಲಿ ವ್ಯತ್ಯಾಸವೇನೂ ಇಲ್ಲವೆಂದಾದರೆ ಅವನು ತನ್ನ ಆಯುಷ್ಯದ ಮೂವತ್ತು ವರ್ಷಗಳನ್ನು ವ್ಯರ್ಥಗೊಳಿಸಿದ್ದಾನೆ ಎಂದೇ ಅರ್ಥ.
► ದ್ವೇಷ ಹಾಗೂ ಹಿಂಸೆಯ ಜೊತೆ ಇಸ್ಲಾಮ್ ಧರ್ಮ ಹಾಗೂ ಮುಸ್ಲಿಮ್ ಸಮಾಜದ ಹೆಸರನ್ನು ಜೋಡಿಸಲಾದಾಗ ನನಗೆ ದುಃಖ ವಾಗುತ್ತದೆ. ಇಸ್ಲಾಮ್ ಹಂತಕ ಧರ್ಮ ಅಲ್ಲ. ಇಸ್ಲಾಮ್‌ನ ಅರ್ಥವೇ ಶಾಂತಿ. ಜನರು ಈ ರೀತಿ ಮುಸ್ಲಿಮರ ಮೇಲೆ ಹಿಂಸೆಯ ಹಣೆಪಟ್ಟಿ ಕಟ್ಟುತ್ತಿರುವಾಗ ನಾನು ನನ್ನ ಮನೆಯಲ್ಲಿ ಮೂಕ ವೀಕ್ಷಕನಾಗಿರಲು ಸಾಧ್ಯವಿಲ್ಲ.
► ನಾನು ಆರಿಸಿಕೊಂಡಿರುವ ಗುರಿಗಳು ನನ್ನನ್ನು ಸದಾ ಚಲನ ಶೀಲನಾಗಿಡುತ್ತವೆ.
► ನಿಮ್ಮ ಮಾತಿನ ಪರವಾಗಿ ನಿಮ್ಮ ಬಳಿ ಪುರಾವೆಗಳಿದ್ದರೆ ಆ ನಿಮ್ಮ ಮಾತು ಬೊಗಳೆ ಎನಿಸಿಕೊಳ್ಳುವುದಿಲ್ಲ.
► ಸ್ನೇಹ ಅಂದರೇನು ಎಂಬುದನ್ನು ವ್ಯಾಖ್ಯಾನಿಸುವುದು ಕಷ್ಟ. ಅದು ನಿಮಗೆ ಶಾಲೆಯಲ್ಲಿ ಕಲಿಯಲು ಸಿಗುವುದಿಲ್ಲ. ಆದರೆ ನೀವು ಸ್ನೇಹವನ್ನು ಅರಿತಿಲ್ಲ ಎಂದಾ ದರೆ ಬದುಕಿನಲ್ಲಿ ಮತ್ತೇನನ್ನೂ ಕಲಿತಿಲ್ಲ ಎಂದೇ ಅರ್ಥ.
► ನಾನು ನನ್ನ ಮನೆಯೊಳಗೆ ತುಂಬಾ ಸಜ್ಜನನಾಗಿರುತ್ತೇನೆ. ಆದರೆ ಈ ವಿಷಯವನ್ನು ನಾನು ಹೊರಗೆ ಯಾರಿಗೂ ತಿಳಿಸುವುದಿಲ್ಲ. ಏಕೆಂದರೆ ನನಗೆ ತಿಳಿದಿರುವಂತೆ ತುಂಬಾ ಸೌಜನ್ಯ ಇರುವ ಹೆಚ್ಚಿನವರು ಬದುಕಿನಲ್ಲಿ ಹೆಚ್ಚೇನನ್ನೂ ಸಾಧಿಸುವುದಿಲ್ಲ.
► ಯುದ್ಧಗಳು ಭೂಪಟಗಳನ್ನು ಬದಲಿಸಿಬಿಡುತ್ತವೆ. ಆದರೆ ದಾರಿದ್ರ್ಯದ ವಿರುದ್ಧ ಯುದ್ಧ ಸಾರುವ ಮೂಲಕ ನಾವು ಬದಲಾವಣೆಯ ಭೂಪಟ ನಿರ್ಮಿಸಬಹುದು.
► ಜನರನ್ನು ಅವರ ಬಣ್ಣದ ಕಾರಣಕ್ಕೆ ದ್ವೇಷಿಸುವುದು ಘೋರ ತಪ್ಪು. ನೀವು ಯಾವ ಬಣ್ಣದವರನ್ನು ದ್ವೇಷಿಸುತ್ತೀರಿ ಎಂಬುದು ಮುಖ್ಯವಲ್ಲ. ಬಣ್ಣದ ಆಧಾರದಲ್ಲಿ ದ್ವೇಷಿಸುವುದೇ ಘೋರ ತಪ್ಪು.
► ನೀವು ಸಂಪತ್ತುಳ್ಳವರಾಗಬೇಕಿದ್ದರೆ ಕಡ್ಡಾಯವಾಗಿ ಸಂಪತ್ತನ್ನು ವಿತರಿಸಬೇಕು. ನಿಜವಾದ ಸಂಪನ್ನತೆ ಇರುವುದೇ ಹಂಚಿ ತಿನ್ನುವುದರಲ್ಲಿ.
► ಕರಿಯ ಜನ ಸಾಮಾನ್ಯರು ನರಕ ಯಾತನೆ ಅನುಭವಿಸುತ್ತಿರುವಾಗ ನಾನೊಬ್ಬ ಸಾಕಷ್ಟು ಮುಂದೆ ಬಂದಿದ್ದೇನೆ. ಆದರೆ ನಿಜವಾಗಿ ಕರಿಯರೆಲ್ಲರೂ ವಿಮೋಚನೆ ಪಡೆಯುವ ತನಕ ನಾನು ವಿಮೋಚಿತನಲ್ಲ.
► ಹೊಡೆದವನಿಗೆ ತಿರುಗಿ ಹೊಡೆಯದವನನ್ನು ನಾನು ಗೌರವಿಸುವುದಿಲ್ಲ. ನೀವು ನನ್ನ ನಾಯಿಯನ್ನು ಕೊಂದಿದ್ದರೆ, ನೀವು ನಿಮ್ಮ ಬೆಕ್ಕನ್ನು ಅಡಗಿಸಿಟ್ಟುಕೊಳ್ಳುವುದು ಉತ್ತಮ.
► ನಿಮ್ಮ ಮುಂದಿರುವ ಪರ್ವತಕ್ಕಿಂತ ನಿಮ್ಮ ಬೂಟಿನೊಳಗಿರುವ ಮರಳಿನ ಒಂದು ಕಣವು ನಿಮ್ಮನ್ನು ಹೆಚ್ಚು ದಣಿಸಿಬಿಡುತ್ತದೆ.
► ಚಾಂಪಿಯನ್ ಆಗಲು ನಿಪುಣತೆ ಮತ್ತು ಸಂಕಲ್ಪ ಎರಡೂ ಬೇಕು. ಆದರೆ ನಿಪುಣತೆಗಿಂತ ಸಂಕಲ್ಪವು ಹೆಚ್ಚು ಗಟ್ಟಿಯಾಗಿರಬೇಕು.
► ವಿಯೆಟಾಮ್‌ನ ಜನರ ಜೊತೆ ನನಗೆ ಯಾವ ಜಗಳವೂ ಇಲ್ಲ. ಅವರು ಯಾರೂ ನನ್ನನ್ನು ನಿಗ್ಗರ್ ಎಂದು ನಿಂದಿಸಿಲ್ಲ.
► ನನಗೆ ಜೈಲಿಗೆ ಹೋಗುವ ಭಯವೇನೂ ಇಲ್ಲ. ಕಳೆದ ನಾಲ್ಕು ನೂರು ವರ್ಷಗಳಿಂದ ನಾವು ಜೈಲಲ್ಲೇ ಇದ್ದೇವಲ್ಲ!
► ನನ್ನ ಶ್ರೀಮಂತಿಕೆ ಅಡಗಿರುವುದು ನನ್ನ ಜ್ಞಾನ, ನನ್ನ ಆತ್ಮಾಭಿಮಾನ, ನನ್ನ ಪ್ರೀತಿ ಮತ್ತು ನನ್ನ ಆಧ್ಯಾತ್ಮಿಕತೆಯಲ್ಲಿ.
► ಪ್ರೀತಿ, ಪ್ರೇಮ, ಸಹಾನುಭೂತಿ ಇತ್ಯಾದಿ ಮನಸ್ಸಿಗೆ ಸಂಬಂಧಿಸಿದ ವಿಷಯಗಳನ್ನು ನೋಡುವುದಾದರೆ ನಾನು ನಿಜಕ್ಕೂ ತುಂಬ ಶ್ರೀಮಂತ.
► ನಾವು ಬಹಳಷ್ಟು ಪ್ರೀತಿಸುವ ಭೌತಿಕ ವಸ್ತುಗ�