ಭಟ್ಕಳ: ವಿಮೆ ಹಣ ಪಡೆಯಲು ಸುಳ್ಳು ಮರಣ ದಾಖಲೆ ಪತ್ರ ಸೃಷ್ಟಿಸಿದ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ

Update: 2022-01-30 16:03 GMT

ಭಟ್ಕಳ: ವಿಮೆ ಹಣ ಪಡೆಯಲು ಸುಳ್ಳು ಮರಣ ದಾಖಲೆ ಪತ್ರ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು, ಪ್ರಮುಖ ಆರೋಪಿ ಹೆಚ್.ವಿ.ಹರ್ಷವರ್ಧನ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ಮೈಸೂರು ಸೆಂಟ್ರಲ್ ಜೈಲಿನಿಂದ ( ವಿಚಾರಣಾಧೀನ ಕೈದಿ,ಯುಟಿಪಿ ನಂ.17265) ಕರೆ ತಂದು ಶನಿವಾರ ಭಟ್ಕಳ ನ್ಯಾಯಾಲಯದಿಂದ ಹಾಜರುಪಡಿಸಲಾಯಿತು.

ಆರೋಪಿಯನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ವಿನಂತಿಸಿಕೊಂಡಿದ್ದು, ನ್ಯಾಯಾಧೀಶರು 7 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಫೆ.5ರಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆ.465, 468, 471 ಆರ್/ಡಬ್ಲ್ಯೂ 120 (ಬಿ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೇ ಆರೋಪಿಯು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಸುಳ್ಳು ಮರಣ ದಾಖಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವೃಗೊಳಿಸಿದ್ದು, ನ್ಯಾಯಾಲಯದ ಆದೇಶ ನೀಡುತ್ತಿದ್ದಂತೆಯೇ ಹರ್ಷವರ್ಧನನ್ನು ಭಟ್ಕಳ ಪಟ್ಟಣದಿಂದ ಹೊರಗೆ ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?: ಮೀನಾಕ್ಷಿ ಬಿ.ಎಚ್. ಜಂಗನಗದ್ದೆ ಜಾಲಿ ಇವರ ಹೆಸರಿನಲ್ಲಿ ಅವರ ಮಗ ಹೆಚ್.ವಿ.ಹರ್ಷವರ್ಧನ ಮರಣ ದಾಖಲೆ ಪತ್ರ ನೀಡುವಂತೆ ಕಳೆದ ಆಗಸ್ಟ್ , 2021ರಲ್ಲಿ ಭಟ್ಕಳ ಜಾಲಿ ಪಟ್ಟಣ ಪಂಚಾಯತಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಆದರೆ ಅರ್ಜಿದಾರರು ಹಾಗೂ ಅರ್ಜಿಯಲ್ಲಿ ಹೇಳಲಾದ ಮರಣ ಹೊಂದಿದವರು ಇಬ್ಬರೂ ಭಟ್ಕಳದವರಲ್ಲದೇ ಇರುವುದು ಹಾಗೂ ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿ ಮರಣ ದಾಖಲೆ ಸೃಷ್ಟಿಸಿರುವುದು ಅನುಮಾನಕ್ಕೆ ಕಾರಣವಾಗಿತ್ತು.

ಮರಣ ಹೊಂದಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲು ವಿಮೆ ಅಧಿಕಾರಿಗಳು ಭಟ್ಕಳದಲ್ಲಿ ಹರ್ಷವರ್ಧನ ವಿಳಾಸ ತಡಕಾಡುತ್ತಿದ್ದಂತೆಯೇ ಪ್ರಕರಣ ಬೆಳಕಿಗೆ ಬಂದಿದ್ದು, ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ವಿನಾಯಕ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News