ಫೆ.12 ರಿಂದ ಕಡತ ವಿಲೇವಾರಿ ಅಭಿಯಾನ : ಸಚಿವ ಸುನಿಲ್ ಕುಮಾರ್

Update: 2022-02-06 09:14 GMT

ಕಾರ್ಕಳ: ಕಾರ್ಕಳ, ಹೆಬ್ರಿ ತಾಲೂಕಿನ ಸಾಕಷ್ಟು ಸರಕಾರಿ ಕಾರ್ಯಗಳಿಗೆ ವೇಗ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡೂ ತಾಲೂಕಿನಾದ್ಯಂತ ಎಶೇಷ ಕಡತ ವಿಲೇವಾರಿ ಅಭಿಯಾನವನ್ನು ಫೆ.12 ರಿಂದ 19 ರವರೆಗೆ ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದರು.

ಅವರು ಕಾರ್ಕಳದ ವಿಕಾಸ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಮಟ್ಟದಿಂದ ತಾಲೂಕು ಮಟ್ಟದ ಇಲಾಖೆಯ ತನಕ ಕಡತ ವಿಲೇವಾರಿ ಅಭಿಯಾನ ನಡೆಯುತ್ತವೆ. ಹಳೆ ಅರ್ಜಿಗಳ ವಿಲೇವಾರಿ, ‌ಹಳೆ ಕಡತ ವಿಲೇವಾರಿ, ಉಳಿಕೆ ಕಡತ ವಿಲೇವಾರಿ, ಸರ್ಕಾರಿ ಯೋಜನೆಯ ಅರ್ಜಿ ವಿಲೇವಾರಿ, ಪಿಂಚಣಿ, ಸ್ವಂತ ದಾಖಲೆಗಳನ್ನು ಸರಿಪಡಿಸುವುದು, ಪಹಣಿ ಪತ್ರ, ಸರ್ವೆ ಸ್ಕೆಚ್, ಬೇರೆ ಬೇರೆ ಇಲಾಖೆಗಳಲ್ಲಿ ತಿದ್ದುಪಡಿ ಅರ್ಜಿಗಳ ವಿಲೇವಾರಿ ಕಾರ್ಯ ಪೂರ್ಣಗೊಳಿಸುವ ಸಿದ್ಧತೆ ಪೂರ್ಣಗೊಂಡಿರುತ್ತದೆ ಎಂದರು.

ಒಂದು ವಾರಗಳ ಕಾಲ ಎಲ್ಲಾ ಅಧಿಕಾರಿಗಳು ಯಾವುದೇ ಅರ್ಜಿ ಕಡತಗಳನ್ನು ಬಾಕಿ ಇಡದೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಹೊಸದಾಗಿ  ಅರ್ಜಿಗಳನ್ನು ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಆಡಳಿತ ಯಂತ್ರ ಚುರುಕು ಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತಾಗಬೇಕು. ನೇರವಾಗಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುವ ಮೂಲಕ ಹೊಸ ಪರಂಪರೆ ರೂಪುಗೊಳ್ಳುತ್ತದೆ .ಯಾವುದೇ ಅಧಿಕಾರಿಗಳು ಈ ಸಪ್ತಾಹದ ಸಮಯದಲ್ಲಿ ಕೆಲಸಕ್ಕೆ ಗೈರು ಹಾಜರಾಗುವಂತಿಲ್ಲ. ಮಾತ್ರವಲ್ಲದೆ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಸರಕಾರಿ ಕಚೇರಿ ಗಳಿಗೆ ಭೇಟಿ ನೀಡಿ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.

ಫೆ. 19: ಬೃಹತ್ ಕಂದಾಯ ಮೇಳ

ವಿಲೇವಾರಿ ಆದ ಅರ್ಜಿಗಳ ಪಲಾನುಭವಿಗಳು ಹಾಗೂ ಸರಕಾರಿ ಸೌಲಭ್ಯಗಳನ್ನು ವಿತರಣಾ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಫೆ. 19ರಂದು ಬೃಹತ್ ಕಂದಾಯ ಮೇಳ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಂದಾಯ ಸಚಿವರು ಉದ್ಘಾಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News