ಹಿಜಾಬ್ ನೆಪದಲ್ಲಿ ಪ್ರೌಢಶಾಲಾ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಮಾನಸಿಕ ಹಿಂಸೆ: ಝುಲೈಕಾ

Update: 2022-02-16 06:17 GMT

ಮಂಗಳೂರು, ಫೆ.16: ಪ್ರೌಢಶಾಲೆಯ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹಿಜಾಬ್ ನೆಪದಲ್ಲಿ ಮಾನಸಿಕವಾಗಿ ಹಿಂಸಿಸುತ್ತಿರುವ ಕೃತ್ಯ ಖಂಡನಾರ್ಹ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಜಿಲ್ಲಾ ಅಧ್ಯಕ್ಷೆ ಝುಲೈಕಾ ಬಜ್ಪೆ ಹೇಳಿದ್ದಾರೆ.

ಸುದ್ದಿಗೋ಼‍ಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮಾನಸಿಕವಾಗಿ ಹಿಂಸಿಸುತ್ತಿರುವ ಶಾಲಾ ಶಿಕ್ಷಕರು, ಶಾಲಾಡಳಿತ ಮಂಡಳಿಯ ವರ್ತನೆಯನ್ನು  ಖಂಡಿಸುತ್ತೇವೆ.  ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ ಅರ್ಜಿಗಳು ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿವೆ. ಈ ನಡುವೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆಯಾದರೂ, ಅದು ಪದವಿ ಪೂರ್ವ ಕಾಲೇಜುಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ರಾಜ್ಯದ ಹಲವು ಕಡೆ ಪ್ರೌಢ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯವರು ಇದೇ ಆದೇಶವನ್ನು ಹಿಡಿದುಕೊಂಡು ಪ್ರೌಢಶಾಲಾ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮತ್ತು ಶಿಕ್ಷಕಿಯರಿಗೆ ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ ಮತ್ತು ಬುರ್ಖಾ ಕಳಚಲು ಒತ್ತಾಯಪಡಿಸುತ್ತಿದ್ದಾರೆ ಎಂದು ದೂರಿದರು.

 ಶಿರವಸ್ತ್ರ ಧರಿಸಿ ಶಾಲೆಗೆ ಬಂದ ಮಡಿಕೇರಿ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 32 ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ವಾಪಸ್ ಕಳುಹಿಸಿದೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಎಸೆಸೆಲ್ಸಿ ಪೂರ್ವ ತಯಾರಿ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದೆ. ಶಿಕಾರಿಪುರದ 90 ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಗಿದೆ. ಮಂಡ್ಯದ ಶಾಲೆಯೊಂದರಲ್ಲಿ ಶಾಲಾ ಶಿಕ್ಷಕಿಯ ಬುರ್ಖಾವನ್ನು ಗೇಟ್ ಹೊರಗಡೆಯ ಕಳಚುವಂತೆ ಮಾಡಲಾಗಿತ್ತು. ರಾಜ್ಯದ ವಿವಿಧ ಕಡೆಗೆ ಇಂತಹ ಹಲವಾರು ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಭೀತಿ, ಅಭದ್ರತೆಯ ಕಾರಣದಿಂದಾಗಿ ಹೆಣ್ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಹುದಾದ ಆತಂಕವಿದೆ. ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕಿಗೆ ತಡೆ ಉಂಟು ಮಾಡುವ ಈ ರೀತಿಯ ಹೊಣೆಗೇಡಿತನದ ಕೃತ್ಯಗಳು ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ. ರಾಜ್ಯದಲ್ಲಿ ಸಂಭವಿಸುತ್ತಿರುವ ಇಂತಹ ಅನಾಗರಿಕ ಕೃತ್ಯಗಳಿಂದ ಇಡೀ ರಾಜ್ಯವೇ ದೇಶದ ಮುಂದೆ ತಲೆತಗ್ಗಿಸಿ ನಿಲ್ಲಬೇಕಾಗಿ ಬಂದಿದೆ ಎಂದವರು ಹೇಳಿದರು.

ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವಾಗ ಸರಕಾರ ಮತ್ತು ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳ ಹಿಂದೆ ಅದರ ಪಾತ್ರವಿರುವುದನ್ನು ಸ್ಪಷ್ಟಪಡಿಸುತ್ತದೆ. ಪ್ರೌಢ ಶಾಲಾ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಹಿಂಸಿಸಿದ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಗೊಳ್ಳಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆಗಳನ್ನು ತಡೆಯಲು ಸರಕಾರವು ಕೂಡಲೇ ಕಾರ್ಯ ಪ್ರವೃತ್ತವಾಗಬೇಕು ಎಂದು ವಿಮೆನ್‍ ಇಂಡಿಯಾ ಮೂವ್ ಮೆಂಟ್ ರಾಜ್ಯ ಅಧ್ಯಕ್ಷೆ ಶಾಹಿದಾ ತಸ್ನೀಂ ಆಗ್ರಹಿಸಿದ್ದಾರೆ.

ಹೈಕೋರ್ಟ್ ಆದೇಶವನ್ನು ಅರ್ಥೈಸಿಕೊಂಡು, ಶಿಕ್ಷಣ ಕೇಂದ್ರಗಳಲ್ಲಿ ಯಾವುದೇ ಬಿಕ್ಕಟ್ಟು ತಲೆದೋರದಂತೆ ನೋಡಿಕೊಂಡಿರುವ ದ.ಕ. ಜಿಲ್ಲೆಯ ಶಾಲಾ ಅಭಿವೃದ್ಧಿ ಮಂಡಳಿಗಳು ಮತ್ತು ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ಕರಾವಳಿ ಮಹಿಳಾ ಹಕ್ಕುಗಳ ವೇದಿಕೆ ಸಂಚಾಲಕಿ ಆಶಿಕಾ ಮಂಗಳೂರು ಹೇಳಿದ್ದಾರೆ.

ಯಾರ ಮೇಲೆಯೂ ಸ್ಕಾರ್ಫನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಆದರೆ ಆಯ್ಕೆಯ ಸ್ವಾತಂತ್ರ್ಯ ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಇಂದು ಸ್ಕಾರ್ಫ್ ನಿಷೇಧವನ್ನು ಪ್ರಶ್ನಿಸಿಯೇ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿರುವುದು. ಹಾಗಾಗಿ  ಹೆಣ್ಮಕ್ಕಳ ಆಯ್ಕೆಯ ಯಾವುದೇ ಸ್ವಾತಂತ್ರ್ಯವನ್ನು ತಡೆಹಿಡಿಯುವುದು ಸಂವಿಧಾನಬಾಹಿರವಾಗಿದೆ. ಹೈಕೋರ್ಟ್ ಮಧ್ಯಂತರ  ಆದೇಶದ ಬಗ್ಗೆ ನಮಗೆ ಆಕ್ಷೇಪಣೆ ಇದೆ. ಈ ಕಾರಣದಿಂದ ಹೈಕೋರ್ಟ್‌ ತನ್ನ ಆದೇಶವನ್ನು ಮರುಪರಿಶೀಲಿಸಿ ವಿದ್ಯಾರ್ಥಿಗಳ ಸಂವಿಧಾನದತ್ತ ಹಕ್ಕನ್ನು ಎತ್ತಿಹಿಡಿಯಬೇಕೆಂದೂ ನಾವು ಅಗ್ರಹಿಸುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯೆ ಶಂಶಾದ್ ಅಬೂಬಕರ್, ಬಂಟ್ವಾಳ ಪುರಸಭೆ ಸದಸ್ಯೆ ಝೀನತ್ ಬಂಟ್ವಾಳ, ಮಮ್ತಾಝ್ ವಿಟ್ಲ, ಶಬೀನಾ ನಂದಾವರ, ಅಫ್ರೀನ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News