ಪೌರ ಕಾರ್ಮಿಕರ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಲು ಅಗತ್ಯ ಕ್ರಮ: ದ.ಕ. ಜಿಲ್ಲಾಧಿಕಾರಿ

Update: 2022-03-16 16:08 GMT

ಮಂಗಳೂರು : ಪೌರಕಾರ್ಮಿಕರ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗು ವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಕೋವಿಡ್‌ನ ಮೂರನೇ ಡೋಸ್ ಲಸಿಕೆಗಳನ್ನು  ನೀಡಬೇಕು. ಅವರಿಗೆ ಅಗತ್ಯರುವ ಮಾಸ್ಕ್, ಗ್ಲೌಸ್, ರೈನ್ ಕೋಟ್, ಸೋಪ್ ಹಾಗೂ ಇತ್ಯಾದಿ ಸುರಕ್ಷಿತ ಪರಿಕರಗಳನ್ನು ಸಮರ್ಪಕವಾಗಿ ತಲುಪಿಸಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಅಧಿಕಾರಿಗಳು ಪೌರಕಾರ್ಮಿಕರಿಗೆ ನೀಡುವ ಆಹಾರವನ್ನು ತಾವೇ ಮೊದಲು ಸೇವಿಸಿ ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡುವುದರೊಂದಿಗೆ ಅದರ ಬಗ್ಗೆ ವರದಿ ನೀಡಬೇಕು ಹಾಗೂ ಉತ್ತಮ ಗುಣಮಟ್ಟದ ಆಹಾರ ಅವರಿಗೆ ದೊರೆಯುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪೌರಕಾರ್ಮಿಕರಿಗೆ ನೀಡುವ ವೇತನದಲ್ಲಿ ತಾರತಮ್ಯ ಮಾಡಬಾರದು. ಇಎಸ್‌ಐ, ಪಿಎಫ್ ಪಾವತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆಯನ್ನು ಮಾಡಬೇಕು. ಪೌರ ಕಾರ್ಮಿಕರಿಗೆ ಅಗತ್ಯವಿರುವ ನಿವೇಶನಕ್ಕೆ ಸರಿಯಾದ ಸ್ಥಳ ಗುರುತಿಸಿ ಸರ್ವೆ ಮಾಡಬೇಕು ಎಂದರು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಒಬ್ಬ ಪೌರಕಾರ್ಮಿಕನನ್ನು ಗುರುತಿಸಿ ಮುಂದಿನ ವರ್ಷದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ ದೇನಮಟ್ಟಿ ಹಾಗೂ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News