ಪ್ರಾಧ್ಯಾಪಕರ ದುರ್ನಡತೆ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಸ್.ಐ.ಒ. ಆಗ್ರಹ

Update: 2022-03-17 08:18 GMT

ಮಂಗಳೂರು, ಮಾ.17: ಮಂಗಳೂರು ನಗರದ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ದುಷ್ಪ್ರೇರಣೆಯಾದ ಸಂಬಂಧಪಟ್ಟ ಕಾಲೇಜಿನ ಪ್ರಾಧ್ಯಾಪಕನ ವಿರುದ್ಧ ಕ್ರಮಕ್ಕೆ ಎಸ್.ಐ.ಒ. ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

ನಗರದ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ, ಬೆಂಗಳೂರು ನಿವಾಸಿ ಭರತ್(20) ಎಂಬವರು ತಾನು ವಾಸಿಸುತ್ತಿದ್ದ ಪಿ.ಜಿ.ಯಲ್ಲಿ ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು "ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿಯಿಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರು. ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದುದರಿಂದ, ಈ ಲೋಕವನ್ನು ತ್ಯಜಿಸುತ್ತಿದ್ದೇನೆ" ಎಂದು ತಾಯಿಗೆ ಸಂದೇಶ ಕಳುಹಿಸಿದ್ದು, ಈ ಬಗ್ಗೆ ಮೃತರ ತಾಯಿ  ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು.   ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಸರಕಾರ ಪರಿಹಾರಧನ ನೀಡಬೇಕು ಎಂದು ಎಸ್‍.ಐ.ಒ ಒತ್ತಾಯಿಸಿದೆ.

ಅಲ್ಲದೇ, ಇತ್ತೀಚಿಗೆ ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಹಾಗೆಯೇ, ಹೊರದಿಂದ ಬರುವ ವಿದ್ಯಾರ್ಥಿಗಳೂ ಇಂತಹ ಪ್ರಕರಣಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಹಾಗಾಗಿ, ಜಿಲ್ಲಾಡಳಿತ ಒಂದು ಸಮಿತಿಯನ್ನು ರಚಿಸಿ, ಕಾಲೇಜುಗಳ ಮೇಲೆ ನಿಗಾ ಇಡಬೇಕು. ಮತ್ತು ಮಾನಸಿಕ ಚಿಕಿತ್ಸಕರನ್ನು ನೇಮಿಸಿ ವಿದ್ಯಾರ್ಥಿಗಳಲ್ಲಿ ಇಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುವ ಧೈರ್ಯ ತುಂಬುವ ಕಾರ್ಯ ಆಗಬೇಕು ಎಂದು ಎಸ್.ಐ.ಒ. ಪ್ರಕಟನೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News