ರೇ ಚಿತ್ರಗಳಲ್ಲಿ ‘ನಿಜವಾದ’ ಮನುಷ್ಯ ಭಾವನೆ ಅಭಿವ್ಯಕ್ತ: ಗಿರೀಶ್

Update: 2022-03-18 15:42 GMT

ಮಣಿಪಾಲ : ನವ ವಾಸ್ತವವಾದಿ ಚಿತ್ರ ನಿರ್ಮಾಪಕರಿಗಿಂತ ಭಿನ್ನವಾಗಿ ಸತ್ಯಜಿತ್ ರೇ ಅವರು ತಮ್ಮ ಚಿತ್ರಗಳಲ್ಲಿ ‘ನಿಜವಾದ’ ಮನುಷ್ಯ ಭಾವನೆಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿಯುತಿದ್ದರು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಪ್ರಖ್ಯಾತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.

ಮಣಿಪಾಲ ಮಾಹೆ ವಿವಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ವತಿಯಿಂದ ಸತ್ಯಜಿತ್ ರೇ ಅವರ ಜನ್ಮಶತಾಬ್ಧಿ ಅಂಗವಾಗಿ ಮೂರು ದಿನಗಳ ಕಾಲ ಡಾ.ಟಿ.ಎಂ.ಎ.ಪೈ ಪ್ಲೆನೆಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸತ್ಯಜಿತ್ ರೇ ಚಲನಚಿತ್ರೋತ್ಸವದ ಎರಡನೇ ದಿನ ಪ್ರೊ.ವರದೇಶ ಹಿರೇಗಂಗೆ ಹಾಗೂ ಪ್ರೊ.ಫಣಿರಾಜ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.

ಸತ್ಯಜಿತ್ ರೇ ಅವರು ತಮ್ಮ ಚಿತ್ರಗಳ ದೃಶ್ಯಗಳಲ್ಲಿ ಸೆರೆ ಹಿಡಿಯುತಿದ್ದ ಹಸಿತನ, ಅವರ ಚಿತ್ರಗಳನ್ನು ಉಳಿದವರ ಚಿತ್ರಗಳಿಗಿಂತ ವಿಭಿನ್ನವಾಗಿಸುತ್ತಿತ್ತು. ಹೀಗಾಗಿಯೇ ಅವರ ಚಿತ್ರಗಳು ವಿಶ್ವದ ಚಲನಚಿತ್ರ ದಿಗ್ಗಜರ ಹಾಗೂ ಸಿನಿಮಾ ವಿಮರ್ಶಕರ ಗಮನ ಸೆಳೆಯಿತು ಎಂದವರು ಪ್ರಶ್ನೆಗೆ ಉತ್ತರಿಸುವಾಗ  ಅಭಿಪ್ರಾಯಪಟ್ಟರು.

ಸತ್ಯಜಿತ್ ರೇ ಅವರು ಬದುಕನ್ನು ಭಾವಗೀತೆಯಂಥ ಮಾನವತಾವಾದಿಯ ದೃಷ್ಟಿಕೋನದಿಂದ ನೋಡುತಿದ್ದರು. ಹಾಗೂ ಅದನ್ನು ಪ್ರತಿದಿನದ ನೈಜತೆಯೊಂದಿಗೆ ಚಿತ್ರದಲ್ಲಿ ಮುಂಚೂಣಿಗೆ ತರುತಿದ್ದರು. ರೇ ಸಿನಿಮಾದಲ್ಲಿ ಓರಿಯೆಂಟಲ್ ನೋಟವನ್ನು ಅಳವಡಿಸುತಿದ್ದು, ಅವರ ಅಪ್ಪು ಸರಣಿ ಚಿತ್ರಗಳು ಅತ್ಯುತ್ತಮ ಉದಾಹರಣೆಯಾಗಿವೆ ಎಂದು ಕಾಸರವಳ್ಳಿ ತಿಳಿಸಿದರು. ಅಪರ್ಣ ಪರಮೇಶ್ವರ ಅವರು ಸಂವಾದವನ್ನು ನಡೆಸಿಕೊಟ್ಟರು.

ಚಲನಚಿತ್ರೋತ್ಸವದ ಕೊನೆಯ ದಿನವಾದ ಶನಿವಾರ ಬೆಳಗ್ಗೆ ೯:೧೫ಕ್ಕೆ ಗಿರೀಶ್ ಕಾಸರವಳ್ಳಿ ಅವರು ‘ವಿಶ್ವ ಸಿನಿಮಾದ ಪಕ್ಷಿನೋಟ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ವಿನೋದ್ ಭಟ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಎಂಸಿಎನ್‌ಎಸ್‌ನ ನಿರ್ದೇಶಕ ಡಾ.ಪೃಥ್ವಿರಾಜ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ೧೧:೧೫ಕ್ಕೆ ಕೊನೆಯದಾಗಿ ರೇ ಅವರ ಆಗಂತುಕ ಸಿನಿಮಾ ಪ್ರದರ್ಶನವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News