ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆ: ದಲಿತ್ ಸೇವಾ ಸಮಿತಿ ಆರೋಪ

Update: 2022-03-26 11:41 GMT

ಪುತ್ತೂರು : ತಾಲೂಕಿನ ಕೋಡಿಂಬಾಡಿ ಗ್ರಾಪನಲ್ಲಿರುವ ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್‍ನಲ್ಲಿ ಎಲ್‍ಸಿಆರ್‍ಪಿ ಹುದ್ದೆಯ ನೇಮಕಾತಿಯಲ್ಲಿ ಸರಕಾರದ ಕಾನೂನು ಉಲ್ಲಂಘಿಸಿರುವುದು ಕಂಡು ಬಂದಿದ್ದು, ತಕ್ಷಣ ಈ ಹುದ್ದೆಯ ಬಗ್ಗೆ ಹೊಸತಾಗಿ ನೇಮಕಾತಿ ಮಾಡಿ ಸದ್ರಿ ಹುದ್ದೆಯಲ್ಲಿರುವ ಅಧಿಕಾರಿಯವರು ದುರುಪಯೋಗ ಮಾಡಿರುವ ಎಲ್ಲಾ ಸವಲತ್ತುಗಳನ್ನು ವಾಪಾಸು ಒದಗಿಸಿ ಕೊಡುವಂತೆ ಜಿಪಂ ಹಾಗೂ ತಾಪಂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದಲಿತ್ ಸೇವಾ ಸಮಿತಿ ಉಗ್ರ ಹೋರಾಟ ಮಾಡಲಿದೆ ಎಂದು ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಎಚ್ಚರಿಕೆ ನೀಡಿದ್ದಾರೆ.

ಅವರು ಶನಿವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಈ ನೇಮಕಾತಿ ಹುದ್ದೆ ಸ್ಥಳೀಯವಾಗಿದ್ದು, ವಿಧವೆಯರು ಹಾಗೂ 35 ವರ್ಷ ಮೇಲ್ಪಟ್ಟ ಅವಿವಾಹಿತೆ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಬೇಕಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರಿಗೆ, ಅನಂತರ ಆದ್ಯತೆ ಹಿಂದುಳಿದ ವರ್ಗದವರಿಗೆ ನೀಡಬೇಕಾಗಿದೆ. ಆದರೆ ಕೋಡಿಂಬಾಡಿ ಗ್ರಾಪಂನಲ್ಲಿ ನೇಮಕಾತಿ ಮಾಡುವ ವಿಚಾರದಲ್ಲಿ ಮೇಲೆ ಕಾಣಿಸಿದ ಆದ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಜಿಪಂ, ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿರುವುದು ಖಂಡನೀಯವಾಗಿದೆ. ಅಲ್ಲದೆ ಕೋಡಿಂಬಾಡಿ ಗ್ರಾಪಂನವರು ಸದ್ರಿ ಸಂಸ್ಥೆಗೆ ಕಟ್ಟಡವನ್ನು ಒದಗಿಸಿಕೊಟ್ಟಿದ್ದರೂ ಈ ವಿಚಾರದಲ್ಲಿ ತಮಗೆ ಯಾವುದೇ ಸಂಬಂಧವಿಲ್ಲ ಎಂದು ವರ್ತಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಸದಸ್ಯರಾದ ಶಶಿಧರ, ಆನಂದ, ಶಶಿಕಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News