ಮುಕ್ಕ‌ ಪ್ರದೇಶದಲ್ಲಿ ಹುಚ್ಚು ನಾಯಿಗಳ‌ ಕಾಟ; ಮನೆಗೆ ನುಗ್ಗಿ ತಂದೆ-ಮಗಳ‌ ಮೇಲೆ ದಾಳಿ

Update: 2022-03-30 16:30 GMT
ಸಾಂದರ್ಭಿಕ ಚಿತ್ರ

ಮಂಗಳೂರು : ಇಲ್ಲಿನ ಮುಕ್ಕ ಪ್ರದೇಶದಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್‌ ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತ ಹುಚ್ಚುನಾಯಿಗಳ‌ ಕಾಟ ಅತಿರೇಕಕ್ಕೆ ಹೋಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲ‌ದಿನಗಳ‌ ಹಿಂದೆ, ಮಲ್ಲಮಾರ್ ನಿವಾಸಿ ಸಂತೋಷ್ ಎಂಬವರ  ಮನೆಯ ಒಳಗೇ ಪ್ರವೇಸಿದ ಹುಚ್ಚು ನಾಯಿಯೊಂದು ಸಂತೋಷ್ ಹಾಗೂ ಅವರ ಮಗಳ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಸಂತೋಷ್ ಅವರ ಕಾಲಿಗೆ ಗಂಭೀರಗಾಯಗಳಾಗಿತ್ತು. ಮತ್ತು ಅವರ ಮಗಳ ಕೈ ಮತ್ತು ಕಾಲಿಗೆ ಕಚ್ಚಿ ಹುಚ್ಚು ನಾಯಿ ನಾಪತ್ತೆಯಾಗಿತ್ತು. ಬಳಿಕ ನೆರೆಹೊರೆಯವರು ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ‌ ದಾಖಲಿಸಿ ಚಿಕಿತ್ಸೆ ನೀಡಿದ್ದರು.

ಹುಚ್ಚು ನಾಯಿ‌ಕಡಿತದಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್ ಅವರ ಮಗಳ ಕೈಯ ನರ ತುಂಡಾಗಿತ್ತು ಮತ್ತು ಕಾಲಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ‌ ಮಂಗಳವಾರ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯ ಬಳಿಕ ಸ್ಥಳೀಯರು ಬೆಳಗ್ಗಿನ ವೇಳೆಯೇ ಮನೆಯ ಬಾಗಿಲು ತೆರೆಯಲು ಭಯ ಪಡುವಂತಾಗಿದೆ. ಅಲ್ಲದೆ, ಅಂಗಡಿ ಮತ್ತಿತರ ಕಡೆಗಳಿಗೆ‌‌ ತೆರಳಲು ಹಿಂದೇಟು ಹಾಕುತ್ತಿದ್ದು ಗುಂಪು ಗುಂಪಾಗಿ‌ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರ ವೈದ್ಯಕೀಯ ಖರ್ಚು ಮನಪಾ ಭರಿಸಲಿದೆ: ಕಾರ್ಪೊರೇಟರ್ 

ಹುಚ್ಚು ನಾಯಿಯನ್ನು ಕೊಲ್ಲಲಾಗಿದೆ. ಹುಚ್ಚು ನಾಯಿಯ ಕಡಿತಕ್ಕೊಳಗಾದ ಸಂತೋಷ್ ಮತ್ತು ಅವರ ಮಗಳ‌ ವೈದ್ಯಕೀಯ ಖರ್ಚುಗಳನ್ನು ಮಹಾ ನಗರ ಪಾಲಿಕೆ ಭರಿಸಲಿದೆ. ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಮಾತನಾಡುತ್ತೇನೆ. ಈ ಬಗ್ಗೆ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು ಎಂದು ಕಾರ್ಪೊರೇಟರ್ ಕುಮಾರಿ ಶ್ವೇತಾ ಪೂಜಾರಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News