ಉಡುಪಿ: ಸಚಿವ ಈಶ್ವರಪ್ಪರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಲು ಸಿಪಿಐ(ಎಂ) ಒತ್ತಾಯ

Update: 2022-04-13 13:44 GMT

ಉಡುಪಿ : ಉಡುಪಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ  ಸಂತೋಷ ಪಾಟೀಲ್, ತನ್ನ ಸಾವಿಗೆ ಸಚಿವ ಈಶ್ವರಪರೇ ನೇರ ಹೊಣೆಗಾರ ರೆಂದು ಡೆತ್‌ನೋಟ್ ಬರೆದಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಆದ್ದರಿಂದ, ರಾಜ್ಯ ಸರಕಾರ ಕೂಡಲೇ ಸಚಿವ ಈಶ್ವರಪ್ಪ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸಿದೆ.

ಮುಖ್ಯವಾಗಿ ಡೆತ್‌ನೋಟ್‌ನಲ್ಲಿ ಗುತ್ತಿಗೆ ಕೆಲಸದ ಸಂಬಂದ ಶೇ.೪೦ ಕಮಿಷನ್‌ಗಾಗಿ ಒತ್ತಡ ಹೇರಿದ ವಿಚಾರವನ್ನು ಪ್ರಸ್ಥಾಪಿಸಿರುವುದರಿಂದ ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ.೪೦ರಷ್ಟು ಕಮಿಷನ್ ಪಡೆಯುತ್ತಿ ರುವುದಎು ಬಹಿರಂಗಗೊಂಡಿದ್ದು, ಒಟ್ಟು ಗುತ್ತಿಗೆದಾರರ ಕಮಿಷನ್ ವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸು ವಂತೆಯೂ ಸಿಪಿಎಂ ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ಆಗ್ರಹಿಸಿದೆ.

ಒಟ್ಟು ಕಾಮಗಾರಿಯ ಶೇ.೪೦ರಷ್ಟನ್ನು ಕಮಿಷನ್ ಆಗಿ ಪಡೆಯುತ್ತಿರುವು ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಇದನ್ನು ತಡೆಯಲು  ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿತ್ತು ಎಂದು ನೆನಪಿಸಿದ ಸಿಪಿಎಂ ಜಿಲ್ಲಾ ಸಮಿತಿ, ಆಗ ಸಿಪಿಐಎಂ ರಾಜ್ಯ ಸಮಿತಿ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಮತ್ತು ಕಾಮಗಾರಿಗಳ ಕಳಪೆತನವನ್ನು ಹಾಗೂ ಕಾಮಗಾರಿಗಳು ನಡೆಯದೇ ಬಿಲ್ ಮಾಡುವುದನ್ನು ತಡೆಯುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆ ಕುರಿತು ಸೂಕ್ತ ಕ್ರಮ ವಹಿಸಿದ್ದರೆ ದೇಶಕ್ಕೆ ಗುತ್ತಿಗೆ ಸೇವೆಯನ್ನು ಒದಗಿಸುತ್ತಿದ್ದ ಸಂತೋಷ ಪಾಟೀಲ್ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ತಡೆಯಬಹುದಿತ್ತು. ಇದರಿಂದಾಗಿ ಈಗ ಅವರ ಕುಟುಂಬ ಬೀದಿಗೆ ಬೀಳುವಂತಾಯಿತು. ‘ನ ಖಾವುಂಗಾ, ನ ಖಾನೆ ದೂಂಗಾ’ ಎಂದು ಹೇಳಿದ ಚೌಕಿದಾರರು, ಲಿಖಿತ ದೂರು ಬಂದ ನಂತರವೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

ಈ ಕುರಿತು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದೇ ಜವಾಬ್ದಾರಿರಹಿತ ವರ್ತನೆ ತೀವ್ರ ಖಂಡನೀಯ. ಈಗಲಾದರೂ ಇನ್ನಷ್ಠು ಗುತ್ತಿಗೆದಾರರು ಅತ್ಮಹತ್ಯೆ ಗಿಳಿಯುವುದನ್ನು ಮತ್ತು ಅವರ ಕುಟುಂಬಗಳು ಬೀದಿ ಪಾಲಾಗದಂತೆ ತಡೆಯಲು ಸಂತೋಷ ಪಾಟೀಲ ಪ್ರಕರಣವೂ ಸೇರಿದಂತೆ ಶೇ.೪೦ ಕಮಿಷನ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸುವಂತೆ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ  ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News