​ಕಾನೂನು ಕಾಲೇಜಿನಲ್ಲಿ ಬೌದ್ಧಿಕ ಸ್ವತ್ತು ಹಕ್ಕುಗಳ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ

Update: 2022-04-25 14:31 GMT
ಪ್ರೊ.(ಡಾ.) ಟಿ.ರಾಮಕೃಷ್ಣ

ಉಡುಪಿ: ಜಗತ್ತಿನಾದ್ಯಂತ ಯುವಕರು ಶಕ್ತಿ ಮತ್ತು ಚತುರತೆ, ಕುತೂಹಲ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯದತ್ತ ಮುನ್ನಡೆಯಲು ನಾವೀನ್ಯತೆ ಸವಾಲುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಬೌದ್ಧಿಕ ಸ್ವತ್ತು ಹಕ್ಕುಗಳ ಕೇಂದ್ರದ ಮುಖ್ಯಸ್ಥರಾದ ಪ್ರೊ.(ಡಾ.) ಟಿ.ರಾಮಕೃಷ್ಣ ಹೇಳಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಬೌದ್ಧಿಕ ಸ್ವತ್ತು ಹಕ್ಕುಗಳ ದಿನದ ಅಂಗವಾಗಿ ಆಯೋಜಿಸಿದ್ದ ‘ಉತ್ತಮ ಭವಿಷ್ಯಕ್ಕಾಗಿ ಬೌದ್ಧಿಕ ಸ್ವತ್ತು ಹಕ್ಕುಗಳು: ಭಾರತದಲ್ಲಿ ಪ್ರಸ್ತುತ ಸನ್ನಿವೇಶ’ ಎಂಬ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ (ಆನ್‌ಲೈನ್) ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬೌದ್ಧಿಕ ಸ್ವತ್ತಿನ ಹಕ್ಕುಗಳು ಉತ್ತಮ ಭವಿಷ್ಯವನ್ನು ರೂಪಿಸಲು ನಾಳಿನ ಯುವಕರ ತಾಜಾ ದೃಷ್ಟಿಕೋನಗಳು, ನಾವೀನ್ಯತೆಯನ್ನು ಬೆಂಬಲಿಸಲು ಸಹಾಯಕವಾಗಿದ್ದು, ಭಾರತದಲ್ಲಿ ಬೌದ್ಧಿಕ ಸ್ವತ್ತಿನ ಹಕ್ಕುಗಳ ಸಂರಕ್ಷಣೆಗೆ ಪೇಟೆಂಟ್ ಆಕ್ಟ್, ಕಾಪಿರೈಟ್ ಆಕ್ಟ್, ಟ್ರೇಡ್‌ಮಾರ್ಕ್ ಆಕ್ಟ್, ಜಿಯೋಗ್ರಾಫಿಕಲ್ ಇಂಡಿಕೇಷನ್ಸ್ ಆಕ್ಟ್, ಡಿಸೈಸ್ಸ್ ಆಕ್ಟ್ ಇತ್ಯಾದಿ ಕಾನೂನು ಗಳನ್ನು ಜಾರಿಗೆ ತರಲಾಗಿದ್ದು, ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಬೌದ್ಧಿಕ ಸ್ವತ್ತುಗಳ ಹಕ್ಕುಗಳನ್ನು ಸಂರಕ್ಷಿಸಲು ಸರ್ಕಾರವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಮಾತನಾಡಿ, ಬೌದ್ಧಿಕ ಸ್ವತ್ತಿನ ಕಾನೂನು ಜಗತ್ತಿನಲ್ಲಿಯೇ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ಕಾನೂನಿನ ಭಾಗವಾಗಿದ್ದು, ಕಾನೂನು ವಿದ್ಯಾರ್ಥಿಗಳು ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸುವ ಮೂಲಕ ಈ ವಿಷಯಗಳಲಿ್ಲ ಪ್ರಾವಿಣ್ಯತೆ ಪಡೆಯಬೇಕು ಎಂದರು.

ವಿಚಾರ ಸಂಕಿರಣದಲ್ಲಿ ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಡೀನ್ ಡಾ.ಅರುಂಧತಿ ಕುಲಕರ್ಣಿ, ಬೆಂಗಳೂರಿನ ಅಲೆಯನ್ಸ್ ಯೂನಿವರ್ಸಿಟಿಯ ಪ್ರೊ.(ಡಾ).ಪ್ರಕಾಶ್ ಕಣಿವೆ ಮತ್ತು ಗುಜರಾತಿನಮಾರ್ವಾಡಿ ವಿಶ್ವವಿದ್ಯಾಲಯದ ಡಾ.ರಾಹುಲ್ ನಿಕಮ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ದೇಶದ ವಿವಿಧ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯಗಳ ಸುಮಾರು 30 ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಮುಖ್ಯಸ್ಥ ರಘುನಾಥ್ ಕೆ.ಎಸ್., ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷ್ಯ ವಿಜೇತ ಪೈ ಹಾಜರಿದ್ದರು. ಕಾರ್ಯಕ್ರಮದ ಆಯೋಜಕಿ ಜಯಮೋಲ್ ಪಿ.ಎಸ್. ಅತಿಥಿಗಳನ್ನು ಸ್ವಾಗತಿಸಿ, ಡಾ. ನವೀನಚಂದ್ರ ಸಿ.ಬಿ. ನಿರೂಪಿಸಿದರು. ರೋಹಿತ್ ಎಸ್. ಅಮೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News