ಭಟ್ಕಳದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ

Update: 2022-05-19 18:13 GMT

ಭಟ್ಕಳ: ಗುರುವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಟ್ಕಳ ತಾಲೂಕಿನಾದ್ಯಂತ ಜನ‌ ಜೀವನ ಅಸ್ತವ್ಯಸ್ಥಗೊಂಡಿದ್ದು ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಜನರು ಆತಂಕಪಡುವಂತಾಗಿದೆ.

ಬುಧವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಆದರೆ ಬುಧವಾರ ಯಾವುದೇ ಮಳೆಯಾಗದೆ ಜನರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಗುರುವಾರ ಯಾವುದೇ ಮುನ್ಸೂಚನೆಯಿಲ್ಲದೆ ಎಕಾಏಕಿ ಮಳೆ ಸುರಿಯುತ್ತಿದ್ದುದ್ದರಿಂದಾಗಿ ಜನರು ಹವಮಾನ ಇಲಾಖೆಯ ಬಗ್ಗೆ ಅನುಮಾನ ಪಡುವಂತಾಗಿದೆ.

ಭಟ್ಕಳ ತಾಲೂಕಿನಲ್ಲಿ ಮೇ 19ರ ಬೆಳಿಗ್ಗೆ 11 ಗಂಟೆಯ ತನಕ ಕೇವಲ 11 ಮಿ.ಮಿ. ಮಳೆಯಾಗಿದ್ದು ನಂತರ ಜೋರಾದ ಮಳೆಯ ಪ್ರಭಾವ ಮಧ್ಯಾಹ್ನದ ಸಮಯ ತೀವ್ರಗತಿಯನ್ನು ಪಡೆದುಕೊಂಡಿದ್ದು ಹೆಚ್ಚಿನ ಕಡೆಗಳಲ್ಲಿ ನೀರು ತುಂಬಿಕೊಂಡಿದೆ. 

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯುಜಿಡಿ ಕಾಮಾಗಾರಿ ನಡೆಯುತ್ತಿದ್ದು ಅಲ್ಲಲ್ಲಿ ಅಪೂರ್ಣಗೊಂಡ ಕಾಮಾಗಾರಿಯಿಂದಾಗಿ ತಗ್ಗು ರಸ್ತೆಗಳಲ್ಲಿ ತಗ್ಗು ನಿರ್ಮಾಣಗೊಂಡಿದೆ. ಜೆಸಿಬಿ ಮೂಲಕ ದೊಡ್ಡ ದೊಡ್ಡ ಹೊಂಡಗಳನ್ನು ತೋಡಿದ್ದು ಅದನ್ನು ಮುಚ್ಚದೆ ಹಾಗೆ ಬಿಟ್ಟು ಹೋಗಿದ್ದರಿಂದಾಗಿ ಹೊಂಡದಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಅಹ್ವಾನ ನೀಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಿರಾಲಿ, ಬೇಂಗ್ರೆ, ಮಾವಿನಕಟ್ಟೆ ಕಡೆಗಳಲ್ಲಿ ಹಲವು ರೈತರು ಗದ್ದೆಗೆ ಬೀಜ ಬಿತ್ತನೆ ಮಾಡಿದ್ದು ಅಧಿಕ ಮಳೆಯಾಗಿರುವುದರಿಂದ ಬೀಜ ಮೊಳೆಕೆಯೊಡಿಯುವ ಕುರಿತು ರೈತರು ಚಿಂತಿತರಾಗಿದ್ದಾರೆ. ಇನ್ನು 2-3 ದಿನಗಳ ಕಾಲ ಇದೇ ರೀತಿಯಾಗಿ ಮಳೆ ಮುಂದುವರಿದರೆ ಈ ಭಾಗರ ರೈತರು ಮತ್ತೆ ಬೀಜ ಬಿತ್ತನೆ ಮಾಡಬೇಕಾಗ ಬಹುದು ಎನ್ನುವ ಚಿಂತೆಯಲ್ಲಿದ್ದಾರೆ.

ಮಳೆ ಹಾನಿ ಅಂದಾಜು: ಭಟ್ಕಳ ತಾಲೂಕಿನಲ್ಲಿ ಇಲ್ಲಿಯ ತನಕ 173.6 ಮಿ.ಮಿ. ಮಳೆಯಾಗಿದ್ದು ಮಾವಳ್ಳಿಯಲ್ಲಿ 1, ಬೇಂಗ್ರೆಯಲ್ಲಿ1 ಹಾಗೂ ಬೈಲೂರಿನಲ್ಲಿ 1 ಹೀಗೆ ಒಟ್ಟೂ 3 ಮನೆಗಳಿಗೆ ಭಾಗಶ: ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಕಾಲಿಕ ಮಳೆಗೆ ಗ್ರಾಮೀಣ ರಸ್ತೆಗಳು ಕೆಲವು ಕಡೆಗಳಲ್ಲಿ ಗುಂಡಿ ಬಿದ್ದು ಹಾನಿಯಾಗಿದ್ದು ಇನ್ನೂ ಕೆಲವು ಕಡೆಗಳಲ್ಲಿ ರಸ್ತೆಗಳಲ್ಲಿ ಕೆಸರು ತುಂಬಿಕೊಂಡು ಓಡಾಡುವುದೇ ಕಷ್ಟ ಎನ್ನುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News