ಭಟ್ಕಳದಲ್ಲಿ ಶಾಂತಿಕದಡಲು ಬಿಜೆಪಿ ಯುವ ಮೋರ್ಚಾ ಸಂಚು: ಎಸ್ಡಿಪಿಐ ಆರೋಪ

Update: 2022-06-09 04:58 GMT

ಭಟ್ಕಳ: ಹಿರಿಯ ರಾಜಕಾರಣಿ ಉಪಹಣಕಾಸು ಸಚಿವ, ಶರಾವತಿ ಜಲವಿದ್ಯುತ್ ಯೋಜನೆ ಮೂಲಕ ತಾಲೂಕಿಗೆ ಬೆಳಕನ್ನು ನೀಡಿದ ದಿ.ಶಮ್ಸುದ್ದೀನ್ ಜುಕಾಕೋ ಅವರ ಹೆಸರಲ್ಲಿರುವ ಶಮ್ಸುದ್ದೀನ್ ಸರ್ಕಲ್‌ಗೆ ತಿರಂಗ ಸರ್ಕಲ್ ಎಂದು ನಾಮಕರಣ ಮಾಡಬೇಕು ಎಂಬ ಬಿಜೆಪಿ ಯುವ ಮೋರ್ಚಾದ ಬೇಡಿಕೆಯು ಭಟ್ಕಳದಲ್ಲಿ ವಿವಾದವನ್ನು ಸೃಷ್ಟಿಸಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಉತ್ತರಕನ್ನಡ ಜಿಲ್ಲಾಘಟಕದ ನಿಯೋಗ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪರನ್ನು ಭೇಟಿಯಾಗಿ ಶಮ್ಸುದ್ದೀನ್ ವೃತ್ತದ ಹೆಸರು ಬದಲಾವಣೆ ಕುರಿತಂತೆ ನಡೆಯುತ್ತಿರುವ ಸಂಚಿನ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಎಸ್.ಡಿ.ಪಿ.ಐ ಇದರ ವಿರುದ್ಧ ಉಗ್ರ ಹೋರಾಟ ನಡೆಸುತ್ತದೆ ಎಂದು ತಿಳಿಸಲಾಗಿದೆ.

ಎಸ್ಡಿಪಿಐ ಉ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ತೌಫಿಕ್ ಬ್ಯಾರಿ, ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆ, ತಾಲೂಕಾ ಪಂಚಾಯಿತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಯುವ ಮೋರ್ಚಾ ನಗರದ ಜನರಲ್ಲಿ ಅಶಾಂತಿ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಷಡ್ಯಂತ್ರ ನಡೆಸುತ್ತಿದ್ದು ಇದನ್ನು ಸಹಿಸಲಾಗದು ಎಂದು ಹೇಳಿದ್ದಾರೆ.

ದಿ. ಶಮ್ಸುದ್ದೀನ್ ಜೋಕಾಕೋ ಸಾಹೇಬರು, ಭಟ್ಕಳದ ಇತಿಹಾಸದಲ್ಲಿ ಶಾಸಕರಾಗಿ, ಉಪ ಹಣಕಾಸು ಸಚಿವರಾಗಿ ಜೋಗಫಾಲ್ಸ್ ಶರಾವತಿ ವಿದ್ಯುತ್ ಯೋಜನೆಯ ಹರಿಕಾರರಾಗಿ ಭಟ್ಕಳಕ್ಕೆ ಬೆಳಕನ್ನು ತಂದುಕೊಟ್ಟು ಭಟ್ಕಳದ ಕೀರ್ತಿಗೆ ಪಾತ್ರರಾದವರು.  ಇವರೊಬ್ಬ ಪ್ರಸಿದ್ಧ  ರಾಜಕಾರಣಿ ಮತ್ತು ರಾಜ್ಯದ ಶ್ರೇಷ್ಠ ನಾಯಕ, ಎಲ್ಲಾ ಹಿಂದೂ- ಮುಸ್ಲಿಮರು ಸಮಾನವಾಗಿ ಗೌರವಿಸುತ್ತಾರೆ. ಅವರ ಹೆಸರಿನೊಂದಿಗೆ ವೃತ್ತವೂ ಸೇರಿಕೊಂಡಿದೆ. ಇದು ಭಟ್ಕಳದ ಸಮಸ್ತ ಜನತೆಗೆ ಹೆಮ್ಮೆಯ ಸಂಗತಿಯೂ ಆಗಿದೆ. ಶಮ್ಸುದ್ದೀನ್ ರ ಹೆಸರಿಲ್ಲದೆ ಬಟ್ಕಳವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಡಿವೈಎಸ್ಪಿ ಬೆಳ್ಳಿಯಪ್ಪರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಭಟ್ಕಳದಲ್ಲಿ ಗಲಭೆ ಎಬ್ಬಿಸಿ ರಾಜಕೀಯ ಲಾಭಕ್ಕಾಗಿ ಷಡ್ಯಂತ್ರ ನಡೆಸುತ್ತಿರುವುದು ನಮ್ಮ ಪಕ್ಷಕ್ಕೆ ತಿಳಿದು ಬಂದಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕ್ರಮ ಜರುಗಿಸಬೇಕು, ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಕ್ಕೆ ಯಾರಾದರೂ ಕೈಹಾಕಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಫಿಖ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News