ಧಾರ್ಮಿಕ ವ್ಯಕ್ತಿಗಳ ನಿಂದನೆಗೆ ಕಠಿಣ ಕಾನೂನು ರೂಪುಗೊಳ್ಳಲಿ: ಮೌಲಾನ ಕ್ವಾಜಾ ನದ್ವಿ

Update: 2022-06-16 16:55 GMT

ಭಟ್ಕಳ: ಜಾಗತಿಕವಾಗಿ ಮುಸ್ಲಿಮರು ಪ್ರವಾದಿ ಮುಹಮ್ಮದ್ ಪೈಗಂಬರರನ್ನು ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದು, ಯಾವುದೇ ಕಾರಣಕ್ಕೂ ಪ್ರವಾದಿ ನಿಂದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ, ನದ್ವಿ ಹೇಳಿದರು. 

ಅವರು ಗುರುವಾರ ಸಂಜೆ ಇಲ್ಲಿನ ತಂಝೀಮ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದು, ಪ್ರವಾದಿ ನಿಂದಕರನ್ನು ಕಠಿಣ ಕಾನೂನಡಿ ಬಂಧಿಸಿ ಉಗ್ರಶಿಕ್ಷೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. 

ಪ್ರವಾದಿ ಮುಹಮ್ಮದ್ ಪಗಂಬರರು ಸೇರಿದಂತೆ ಯಾವುದೇ ಧರ್ಮದ ಧಾರ್ಮಿಕ ವ್ಯಕ್ತಿಗಳ ನಿಂದನೆ, ಅವಹೇಳನ ಸಲ್ಲದು ಇದಕ್ಕಾಗಿ ಸರ್ಕಾರ ಧಾರ್ಮಿಕ ವ್ಯಕ್ತಿಗಳ ನಿಂದನೆ ವಿರುದ್ಧ ಕಠಿಣ ಕಾನೂನು ರೂಪಿಸಬೇಕೆಂದು ಆಗ್ರಹಿಸಿದ ಅವರು, ಪ್ರವಾದಿ ಪ್ರೇಮದ ಹೆಸರಲ್ಲಿ ಜನರು ಯಾವತ್ತೂ ಕೂಡ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಸಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡುವುದು ಕೂಡ ಅತ್ಯಂತ ಖಂಡನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಮಾಅತುಲ್ ಮುಸ್ಲಿಮೀನ್ ಖಾಜಿ ಮೌಲಾನ ಅಬ್ದುಲ್ ರಬ್ ನದ್ವಿ, ತಂಝೀಮ್ ಸಂಸ್ಥೆಯ ಕಾರ್ಯದರ್ಶಿ ಜೈಲಾನಿ ಶಾಬಂದ್ರಿ, ಡಾ.ಹನೀಫ್ ಶಬಾಬ್, ಭಟ್ಕಳ ಮುಸ್ಲಿಮ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಜಾಮಿಯಾ ಮಸೀದಿ(ಚಿನ್ನದಪಳ್ಳಿಯ) ಇಮಾಮ್ ಮತ್ತು ಖತೀಬ್ ಮೌಲಾನ ಅಬ್ದುಲ್ ಅಲೀಮ್ ಖತಿಬಿ ಜಮಾಅತುಲ್ ಮುಸ್ಲಿಮೀನ್ ಉಪಾಧ್ಯಕ್ಷ ಜಾಫರ್ ಮೊಹತೆಶಮ್ ಮತ್ತಿತರ ಗಣ್ಯರು ಉಪಸ್ಥಿರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News