ವಿದ್ಯಾರ್ಥಿಗಳು ಭಾರತೀಯ ಪತ್ರಿಕೆಗಳ ಇತಿಹಾಸ ಅರಿತುಕೊಳ್ಳಬೇಕು: ಎಂ.ಆರ್.ಮಾನ್ವಿ

Update: 2022-08-05 17:16 GMT

ಭಟ್ಕಳ: ಭಾರತದ ಸ್ವತಂತ್ರ್ಯ ಚಳುವಳಿಯಲ್ಲಿ ಪತ್ರಿಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ವಿದ್ಯಾರ್ಥಿ ಸಮುದಾಯ ಅದನ್ನು ಅರಿತುಕೊಳ್ಳಬೇಕು ಎಂದು ಭಟ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ಹೇಳಿದರು.

ಅವರು ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ  ಸ್ವತಂತ್ರ್ಯ ಚಳುವಳಿಯಲ್ಲಿ ಪತ್ರಿಕೆಗಳ ಪಾತ್ರ ವಿಷಯದ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು. 

ತಾಲೂಕಿನ ಪಿಯುಸಿ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿಯನ್ನು ತೋರ್ಪಡಿಸುತ್ತದೆ. ಪ್ರಬಂಧ ಬರೆಯುವ ಮೂಲಕ ಭಾರತದ ಸ್ವತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯಾವ ರೀತಿಯ ಪಾತ್ರ ವಹಿಸಿದ್ದವು ಎಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದರು.

ಸಂಘದ ಗೌರವ ಅಧ್ಯಕ್ಷ ರಾಧಕೃಷ್ಣ ಭಟ್ ಮಾತನಾಡಿ, ದೇಶವು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಿಕೊಳ್ಳುವ ಈ ಸಂದರ್ಭದಲ್ಲಿ ಪತ್ರಿಕೆಗಳು ದೇಶದ ಸ್ವತಂತ್ರ್ಯ ಚಳುವಳಿಯಲ್ಲಿ ವಹಿಸಿದ್ದ ಪಾತ್ರದ ಕುರಿತಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಇಂತಹ ಸ್ಪರ್ಧೆಗಳಿಂದಾಗಿ ಮಕ್ಕಳಲ್ಲಿ ಜ್ಞಾನವೃದ್ಧಿ ಯುಂಟಾಗುತ್ತದೆ ಎಂದರು. 

ಪ್ರಬಂಧ ಸ್ಪರ್ಧೆಯ ಸಂಚಾಲಕ ಅತಿಕುರ್ರಹ್ಮಾನ್ ಶಾಬಂದ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಶೈಲೇಶ್ ವೈದ್ಯ ವಂದಿಸಿದರು. ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಧಫೆದಾರ್, ಕ.ಸಾ.ಪ ಅಧ್ಯಕ್ಷ ಗಂಗಾಧರ್ ನಾಯ್ಕ, ಜಿಲ್ಲಾ ಸಂಘದ ಉಪಾಧ್ಯಕ್ಷ ಭವಾನಿಶಂಕರ್, ತಾಲ್ಲೂಕು ಉಪಾಧ್ಯಕ್ಷ ಮೋಹನ್ ನಾಯ್ಕ, ಖಜಾಂಚಿ ರಿಜ್ವಾನ್ ಗಂಗೋಳಿ, ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News