ಸಂಘಪರಿವಾರದ ಕಾರ್ಯಕರ್ತನಿಗೆ ಸ್ನೇಹಿತನಿಂದಲೇ ಹಲ್ಲೆ; ಕೋಮು ಸಾಮರಸ್ಯ ಕದಡಲು ಸುಳ್ಳು ದೂರು
ಭಟ್ಕಳ: ತನ್ನ ಸ್ನೇಹಿತನಿಂದಲೇ ಹಲ್ಲೆಗೊಳಗಾದ ಸಂಘಪರಿವಾರದ ಕಾರ್ಯಕರ್ತನೊಬ್ಬ ಸತ್ಯ ಮರೆಮಾಚಿ ಅನ್ಯಧರ್ಮಿಯರಿಂದ ಹಲ್ಲೆ ಎಂದು ದೂರು ನೀಡಿ ಕೋಮು ಸಾಮರಸ್ಯ ಕದಡಲು ಯತ್ನಿಸಿದ್ದ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಅ. 08 ರಂದು ರಾತ್ರಿ ಮಾವಿನಕಟ್ಟಾ ಕಡೆಯಿಂದ ಮುರ್ಡೇಶ್ವರದ ಕುಂಬಾರಕೇರಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ತನಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅವರು ಅನ್ಯ ಧರ್ಮಕ್ಕೆ ಸೇರಿದವರು ಎಂದು ಆರೋಪಿಸಿ ಸೋಮಯ್ಯ ನಾಯ್ಕ ಎಂಬವರ ಪುತ್ರ ಸಂಘಪರಿವಾರ ಸಂಘಟನೆಯ ಕಾರ್ಯಕರ್ತ ನವೀನ ಎಂಬಾತ ಪೊಲೀಸ್ ದೂರು ನೀಡಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ಸಂಬಂಧ ಆರೋಪಿ ವೆಂಕಟೇಶ್ ನಾಯ್ಕ್ ಎಂಬವರ ಪುತ್ರ ನವೀನ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸ್ನೇಹಿತರಾದ ಸೋಮಯ್ಯ ನಾಯ್ಕ ಎಂಬವರ ಪುತ್ರ ನವೀನ ಮತ್ತು ವೆಂಕಟೇಶ ನಾಯ್ಕ ಎಂಬವರ ಪುತ್ರ ನವೀನ ನಡುವೆ ಅ.8ರಂದು ವೈಯಕ್ತಿಕ ವಿಷಯಕ್ಕೆ ಜಗಳ ನಡೆದಿದ್ದು, ಘಟನೆಯಲ್ಲಿ ಸೋಮಯ್ಯ ನಾಯ್ಕ ಎಂಬವರ ಪುತ್ರ ನವೀನ್ ಗೆ ಗಾಯಗಳಾಗಿವೆ. ಆದರೆ ವೈಯಕ್ತಿಕ ಕಾರಣಗಳಿಗೆ ಸ್ನೇಹತನಿಂದಲೇ ಹಲ್ಲೆಗೊಳಗಾಗಿದ್ದನ್ನು ಮರೆಮಾಚಿ ಕೋಮು ಸ್ವರೂಪದ ಘಟನೆಯನ್ನಾಗಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಪೊಲೀಸರಿಗೆ ನೀಡಿ ಪ್ರಕರಣ ದಾಖಲಿದ್ದಲ್ಲದೆ, ಅನ್ಯ ಧರ್ಮದ ವ್ಯಕ್ತಿಗಳು ಪ್ರಕರಣದ ಆರೋಪಿಗಳು ಎಂದು ಬಿಂಬಿಸಿ ಸಮಾಜದಲ್ಲಿ ಶಾಂತಿ ಕದಡುವ ಬಗ್ಗೆ ಯೋಜನೆ ರೂಪಿಸಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸ್ನೇಹಿತರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.