ಬಿ.ಸಿ.ರೋಡ್: ನಿರ್ಮಾಣ ಹಂತದ ಪಿಂಕ್ ಶೌಚಾಲಯದಲ್ಲಿ ವಾಮಾಚಾರದ ಕುರುಹುಗಳು ಪತ್ತೆ
ಬಂಟ್ವಾಳ, ನ.16: ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಶೌಚಾಲಯದಲ್ಲಿ ಕುಂಬಳಕಾಯಿ, ಪ್ರಸಾದ, ಮೊಟ್ಟೆ, ಕುಂಬಳಕಾಯಿ ಮೇಲೆ ಗೊಂಬೆಯೊಂದು ಪತ್ತೆಯಾಗಿದ್ದು ವಾಮಾಚಾರ ನಡೆಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಂಟ್ವಾಳ ಪುರಸಭೆಯ ವತಿಯಿಂದ ಬಿ.ಸಿ.ರೋಡಿನಲ್ಲಿ ಮಹಿಳೆಯರಿಗಾಗಿ ಪಿಂಕ್ ಟ್ಲಾಯೆಟ್ ನಿರ್ಮಾಣವಾಗುತ್ತಿದೆ. ಶೌಚಾಲಯದ ಒಳಗೆ ಇಂದು ಬೆಳಗ್ಗೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿವೆ.
ಕೇಂದ್ರ ಸರಕಾರದ ಆದೇಶದಂತೆ ಈ ಶೌಚಾಲಯ ನಿರ್ಮಾಣವಾಗುತ್ತಿದ್ದು ಶೌಚಾಲಯ ನಿರ್ಮಾಣವನ್ನು ವಿರೋಧಿಸಿ ಸ್ಥಳೀಯ ಅಂಗಡಿಗಳ ಮಾಲಕರು ಪಿಂಕ್ ಟ್ಲಾಯೆಟ್ ನಿರ್ಮಾಣ ವಿರೋಧಿ ಸಮಿತಿಯೊಂದನ್ನು ರಚಿಸಿ ಜಿಲ್ಲಾಡಳಿತ ಸಹಿತ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಶೌಚಾಲಯ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಇದೀಗ ಮತ್ತೆ ಶೌಚಾಲಯ ನಿರ್ಮಾಣದ ಕಾಮಗಾರಿ ಭರದಿಂದ ನಡೆಯುತ್ತಿದ್ದು ಶೌಚಾಲಯದ ಪ್ರವೇಶ ದ್ವಾರದಲ್ಲೇ ವಾಮಾಚಾರ ಮಾಡಿರುವ ಕುರುಹುಗಳು ಪತ್ತೆಯಾಗಿದೆ. ಇದು ಶೌಚಾಲಯ ನಿರ್ಮಾಣದ ವಿರೋಧಿಗಳು ಕಾಮಗಾರಿ ಸ್ಥಗಿತಕ್ಕೆ ಮಾಡಿರುವ ತಂತ್ರವಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.