ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತ: ಶಾಸಕ ಅರವಿಂದ ಲಿಂಬಾವಳಿ

Update: 2023-01-02 15:30 GMT

ಬೆಂಗಳೂರು, ಜ.2: ಡೆತ್‍ನೋಟ್‍ನಲ್ಲಿ ತನ್ನ ಹೆಸರು ಬರೆದಿಟ್ಟು ಪ್ರದೀಪ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಸೋಮವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರದೀಪ್ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದ ಗುತ್ತಿಗೆ ಪಡೆದು, ಕೆಲಸ ಮಾಡಿದ್ದ. ಈಗ ಆಗಿರುವ ಘಟನೆಯಿಂದಾಗಿ ನಾನು ದುಃಖದಲ್ಲಿದ್ದೇನೆ ಎಂದರು.

ಜೂನ್, ಜುಲೈ ತಿಂಗಳಲ್ಲಿ ನನ್ನ ಕಚೇರಿಗೆ ಬಂದು ಹೂಡಿಕೆಗೆ ಸಂಬಂಧಿಸಿದಂತೆ ಆಗಿರುವ ಸಮಸ್ಯೆ ಬಗ್ಗೆ ಆತ ತಿಳಿಸಿದ್ದ. ನಾನು ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೆ. ಇದಾದ 15 ದಿನಗಳ ನಂತರ ಮತ್ತೆ ಪ್ರದೀಪ್ ಭೇಟಿಯಾಗಿ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿಸಿದ್ದ. ಆಗಲೂ ದೂರವಾಣಿ ಮೂಲಕವೆ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದೆ ಎಂದು ಲಿಂಬಾವಳಿ ತಿಳಿಸಿದರು.

ಆನಂತರ ಒಂದು ಕಾರ್ಯಕ್ರಮದಲ್ಲಿ ನನ್ನನ್ನು ಭೇಟಿಯಾಗಿ, ಸಮಸ್ಯೆ ಬಗೆಹರಿದಿರುವುದಾಗಿ ತಿಳಿಸಿ ಧನ್ಯವಾದ ಹೇಳಿದ್ದ. ಬಳಿಕ ಆಗಸ್ಟ್ ತಿಂಗಳಲ್ಲಿ ದೂರವಾಣಿ ಮೂಲಕ ನನಗೆ ಸಂಪರ್ಕಿಸಿ, ಕೌಟುಂಬಿಕ ಸಮಸ್ಯೆ ಹೇಳಿಕೊಂಡಿದ್ದರು. ಅವರ ಪತ್ನಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆಯೂ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ, ಪತಿ, ಪತ್ನಿಯನ್ನು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಹೇಳುವಂತೆ ತಿಳಿಸಿದ್ದೆ. ಅದರಂತೆ, ಅಧಿಕಾರಿಗಳು ಮಾತುಕತೆ ಮಾಡಿ ಕಳುಹಿಸಿದ್ದರು ಎಂದು ಅವರು ಹೇಳಿದರು.

ಆ ಮೂರು ಸಂದರ್ಭ ಹೊರತುಪಡಿಸಿ ಆತನ ಬೇರೆ ಯಾವುದೆ ದೂರುಗಳು ನನ್ನ ಬಳಿ ಬಂದಿರಲಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆದು, ಯಾರು ತಪ್ಪು ಮಾಡಿದ್ದಾರೆ ಅನ್ನೋ ವಿಷಯ ಹೊರಗೆ ಬರಬೇಕು. ಎಲ್ಲ ಶಾಸಕರು, ಜನಪ್ರತಿನಿಧಿಗಳಿಗೂ ವಿನಂತಿ ಮಾಡುತ್ತೇನೆ, ಈ ರೀತಿಯ ವಿಚಾರಗಳು ಬಂದಾಗ ಎಚ್ಚರಿಕೆ ಇಂದ ಇರಿ, ಇಲ್ಲದಿದ್ದರೆ ನಿಮ್ಮ ಹೆಸರುಗಳು ಎಫ್‍ಐಆರ್ ಹಾಗೂ ಡೆತ್‍ನೋಟ್‍ನಲ್ಲಿ ಬರಬಹುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

Similar News