ಎಸ್‌ಸಿಡಿಸಿಸಿ ಬ್ಯಾಂಕ್ ಶಾಖಾ ಮ್ಯಾನೇಜರ್ ಗೆ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ನ ಕೋಡಿಯಾಲ್‌ಬೈಲ್ ಶಾಖಾ ವ್ಯವಸ್ಥಾಪಕರಾಗಿರುವ ಜ್ಯೋತಿ ಬಾಳಿಗಾ ಎಂಬವರಿಗೆ ಮೇಘರಾಜ್ ಎಂಬಾತ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಬಂದರ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜ.31ರಂದು ಸಂಜೆ 5ಕ್ಕೆ ಬ್ಯಾಂಕ್‌ನ ಲ್ಯಾಂಡ್‌ಲೈನ್‌ನಿಂದ ಶಾಖೆಯ ಕೌಂಟರ್‌ಗೆ ಮೇಘರಾಜ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ದೂರವಾಣಿ ಕರೆ ಮಾಡಿ 2 ಕೋ.ರೂ. ಠೇವಣಿಗೆ ಸಂಬಂಧಿಸಿ ಬಡ್ಡಿದರವನ್ನು ವಿಚಾರಿಸಿದ್ದಲ್ಲದೆ ಈ ಬಗ್ಗೆ ನೀಡಬೇಕಾಗಿರುವ ಕೆವೈಸಿ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ. ತನ್ನ ಮೊಬೈಲ್ ನಂಬರ್‌ನ್ನು ಅಪರಿಚಿತ ವ್ಯಕ್ತಿಯು ಕೇಳಿದಾಗ ತಾನು ಮೊಬೈಲ್ ನಂಬರ್ ನೀಡಿರುವೆ. ಅಕೌಂಟ್ ಬ್ಯಾಲೆನ್ಸ್ ಕೇಳಿದಾಗ ಅದು ವೈಯಕ್ತಿಕ ದಾಖಲೆ ಎಂದು ತಿಳಿಸಿ ಕೊಡಲಾಗುವುವುದಿಲ್ಲವೆಂದಾಗ ಅಪರಿಚಿತ ವ್ಯಕ್ತಿಯು ಅವಾಚ್ಯ ಶಬ್ಧಗಳಿಂದ ಬೈದು ಪೋನ್ ಸಂಪರ್ಕ ಕಡಿದು ಹಾಕಿ, ಆತನ ಮೊಬೈಲ್‌ನಿಂದ ತನ್ನ ವ್ಯಾಟ್ಸಾಪ್‌ಗೆ ಸಂದೇಶದ ಕಳುಹಿಸಿದ್ದಾರೆ. ಹಾಗಾಗಿ ಅಪರಿಚಿತ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಜ್ಯೋತಿ ಬಾಳಿಗಾ ದೂರಿನಲ್ಲಿ ತಿಳಿಸಿದ್ದಾರೆ.