ಪಾಂಬೂರು: 'ಪರಿಚಯ'ದಿಂದ ರಾಷ್ಟ್ರೀಯ ರಂಗೋತ್ಸವ

Update: 2023-02-09 17:45 GMT

ಉಡುಪಿ: ನಾಡಿನ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾ ಪರಂಪರೆಯನ್ನು ಉಳಿಸಿ, ಬೆಳೆಸಿ, ಪರಿಚಯಿಸುವ ಉದ್ದೇಶದೊಂದಿಗೆ 2012ರಲ್ಲಿ ಪಾಂಬೂರಿನಲ್ಲಿ ಅಸ್ತಿತ್ವಕ್ಕೆ ಬಂದ ‘ಪರಿಚಯ’ ಸಂಸ್ಥೆ ಇದೀಗ ದಶಮಾನೋತ್ಸವ ಆಚರಿಸುತಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಫೆ.12ರಿಂದ 18ರವರೆಗೆ ಪಾಂಬೂರಿನ ‘ಪ್ರಕೃತಿ’ ಪರಿಚಯ ಬಯಲು ರಂಗಮಂದಿರಲ್ಲಿ ಒಂದು ವಾರದ ಪರಿಚಯ ರಾಷ್ಟ್ರೀಯ ರಂಗೋತ್ಸವ 2023 ನಡೆಯಲಿದೆ. ಇದರಲ್ಲಿ ಕನ್ನಡ, ಕೊಂಕಣಿ, ತುಳು, ಹಿಂದಿ ಹಾಗೂ ಬುಂದೇಲಿ ಭಾಷೆಗಳಲ್ಲಿ ಒಟ್ಟು ಏಳು ನಾಟಕಗಳ ಪ್ರದರ್ಶನವಿದ್ದು, ರಂಗಾಸಕ್ತರನ್ನು ಸಂಸ್ಥೆ ಸ್ವಾಗತಿಸುತ್ತದೆ ಎಂದರು.

ಪರಿಚಯ ಯಾವುದೇ ಧರ್ಮ, ಜಾತಿ, ಮತ, ಭಾಷೆಗಳ ಬಂಧನವಿಲ್ಲದ ಸಮಾನ ಮನಸ್ಕರ, ಸ್ವತಂತ್ರ, ರಾಜಕೀಯೇತರ ಸಾಂಸ್ಕೃತಿಕ ಸಂಸ್ಥೆಯಾಗಿದೆ ಎಂದ ಪ್ರಕಾಶ್, ದೇಶೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯಗಳಿಗೆ ಪ್ರೋತ್ಸಾಹ ನೀಡುವುದು. ಗ್ರಾಮೀಣ ಪರಿಸರದಲ್ಲಿ ರಂಗ ಚಟುವಟಿಕೆಗಳನ್ನು ಆಯೋಜಿಸುವುದು, ಜನರಿಗೆ ಮೌಲ್ಯಾಧಾರಿತ ಮನೋರಂಜನೆ ನೀಡುವ  ಉದ್ದೇಶವನ್ನು ಹೊಂದಿದೆ ಎಂದರು.

ಬಯಲು ರಂಗಮಂದಿರ: ಪಾಂಬೂರಿನ ಪ್ರಕೃತಿ ಸೊಬಗಿನ  ಮೇರಿ ನೊರೊನ್ಹಾ ಎಂಬವರು ನೀಡಿ ಸ್ಥಳದಲ್ಲಿ ಸಂಸ್ಥೆಯ ಕನಸಿನ ಯೋಜನೆಯಾದ ಬಯಲು ರಂಗ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಇಲ್ಲೇ ರಂಗೋತ್ಸವ ನಡೆಯಲಿದೆ ಎಂದರು.

ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾದ ವಿಲ್ಸನ್ ಕಯ್ಯಾರ್ ಅವರು ಬಯಲು ರಂಗಮಂದಿರದ ವಿನ್ಯಾಸಕಾರರಾಗಿದ್ದು, ಅವರ ನಿರ್ದೇಶನ ದಡಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಂಗಪ್ರೇಮಿಗಳಿಗೆ ವಿಶಿಷ್ಟ ಅನುಭವವನ್ನು ನೀಡುವ ಬಯಲು ರಂಗಮಂದಿರವನ್ನು ನಾವು ಸಜ್ಜುಗೊಳಿ ಸುತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ, ಖಜಾಂಚಿ ಐವನ್ ಪೀಟರ್, ಟ್ರಸ್ಟಿ ಅರುಳ್ ಡಿಸೋಜ, ಹಾಗೂ ಸಲಹೆಗಾರರರಾದ ಕುರ್ಕಾಲು ಸದಾಶಿವ ಬಂಗೇರ ಉಪಸ್ಥಿತರಿದ್ದರು.

Similar News