ಮೈಕಲ್ ಡಿಸೊಜಾ 'ವಿಶನ್ ಕೊಂಕಣಿ’ ಕಾರ್ಯಕ್ರಮಕ್ಕೆ ಚಾಲನೆ

Update: 2023-02-16 12:38 GMT

ಮಂಗಳೂರು: ಗುಣಮಟ್ಟದ ಪುಸ್ತಕ ಪ್ರಕಟಣೆಯ ಮೂಲಕ ಕೊಂಕಣಿ ಸಾಹಿತ್ಯದ ಬೆಳವಣಿಗೆಗೆ ನವಚೇತನ ತುಂಬುವ ಆಶಯದೊಂದಿಗೆ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಕೊಡುಗೈ ದಾನಿ ಮೈಕಲ್ ಡಿಸೊಜಾ, ದುಬಾಯ್ ಇವರ ಮಹತ್ವಾಕಾಂಕ್ಷಿ ಯೋಜನೆ ’ಮೈಕಲ್ ಡಿಸೊಜಾ ವಿಶನ್ ಕೊಂಕಣಿ’ ಕಾರ್ಯಕ್ರಮಕ್ಕೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಒಪ್ಪಂದಕ್ಕೆ ಸಹಿ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ಪರವಾಗಿ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಮತ್ತು ವಿಶನ್ ಕೊಂಕಣಿ ಪರವಾಗಿ  ಮೈಕಲ್ ಡಿಸೊಜಾ ಒಪ್ಪಂದಕ್ಕೆ ಸಹಿ ಮಾಡಿದರು. 

"ಕೊಂಕಣಿ ಸಾಹಿತ್ಯ ಅಭಿವೃದ್ಧಿಯಾಗಬೇಕಾದರೆ ಉತ್ತಮ ಗುಣಮಟ್ಟದ ಪುಸ್ತಕಗಳು ಪ್ರಕಟವಾಗಬೇಕು. ಮುದ್ರಣ ಹಾಗೂ ವಿತರಣಾ ವೆಚ್ಚದಲ್ಲಿ ಇಂದು ಗಣನೀಯ ಏರಿಕೆಯಾಗಿರುವುದರಿಂದ ಪ್ರಕಾಶಕರು ಪುಸ್ತಕ ಪ್ರಕಟಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಂತಿಮವಾಗಿ ನಷ್ಟವಾಗುವುದು ಸೃಜನಶೀಲ ಸಾಹಿತಿಗಳಿಗೆ ಮತ್ತು ಕೊಂಕಣಿ ಸಾಹಿತ್ಯಕ್ಕೆ. ಸಾಹಿತಿ ಮತ್ತು  ಪ್ರಕಾಶಕರಿಗೆ ಮುದ್ರಣ ವೆಚ್ಚವನ್ನು ಭರಿಸುವುದು ತೊಡಕಾಗಬಾರದು ಎಂಬ ದೃಷ್ಟಿಯಿಂದ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಮುಂದಿನ ಐದು ವರ್ಷಗಳಲ್ಲಿ ನೂರು ಪುಸ್ತಕ ಮುದ್ರಿಸುವ ಗುರಿಯನ್ನು ಇಟ್ಟುಕೊಂಡು ಅನುದಾನ ನೀಡಲಾಗುವುದು. ಈ ಗುರಿ ತಲುಪುವಲ್ಲಿ ವಿಶ್ವದ ಮೇರು ಕೊಂಕಣಿ ಸಂಸ್ಥೆ, ವಿಶ್ವ ಕೊಂಕಣಿ ಕೇಂದ್ರ ಸಾಂಸ್ಥಿಕ ಬೆಂಬಲ ನೀಡಿ ಸಹಕರಿಸಲಿದೆ. ಕೊಂಕಣಿ ಸಾಹಿತಿಗಳು ಮತ್ತು ಪ್ರಕಾಶಕರು ಇದರ ಸದುಪಯೋಗ ಪಡೆದುಕೊಳ್ಳಬೇಕು"  ಎಂದು ಮೈಕಲ್ ಡಿ ಸೊಜಾ ಅಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿ  "ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸಮಗ್ರವಾಗಿ ಬೆಳೆಯಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಸಮಷ್ಟಿಭಾವ ಮುಖ್ಯ. ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈ ಅವರು ನಮಗೆ ಸಮಷ್ಟಿ ಭಾವವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ. ಅವರು ನಮ್ಮ ಪ್ರತೀ ಹೆಜ್ಜೆಗೆ ಪ್ರೇರಣೆ"  ಎಂದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿ ಸೊಜಾ, ಟ್ರಸ್ಟಿ - ಕವಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಬಿ. ದೇವದಾಸ ಪೈ, ಡಾ| ಬಿ. ದೇವದಾಸ ಪೈ, ವಿಶ್ವ ಕೊಂಕಣಿ ಕೇಂದ್ರದ ಸಂಯೋಜಕಿ ಸಹನಾ ಕಿಣಿ, ಕವಿ - ಚಿಂತಕ ಟೈಟಸ್ ನೊರೊನ್ಹಾ, ಹಿರಿಯ ರಂಗಕರ್ಮಿ ಎಡ್ಡಿ ಸಿಕ್ವೇರಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಕೋಶಾಧಿಕಾರಿ ರೋಶನ್ ಮಾಡ್ತಾ ಹಾಗೂ ನಾಸಿರ್ ಉಪಸ್ಥಿತರಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗುರುದತ್ತ ಬಂಟ್ವಾಳಕಾರ್ ಸ್ವಾಗತಿಸಿದರು. ವಿಶನ್ ಕೊಂಕಣಿ ಯೋಜನೆಯ ಪ್ರಧಾನ ಸಂಪಾದಕ ಎಚ್ಚೆಮ್, ಪೆರ್ನಾಲ್ ಯೋಜನೆಯ ರೂಪು ರೇಷೆಗಳ ಬಗ್ಗೆ ವಿವರಿಸಿದರು. ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ. ಆರ್. ಭಟ್ ವಂದಿಸಿದರು. 

ಏನಿದು ವಿಶನ್ ಕೊಂಕಣಿ ? 

ಕೊಂಕಣಿ ಪುಸ್ತಕಗಳ ಪ್ರಕಾಶನಕ್ಕೆ ಅನುದಾನ ಯೋಜನೆ
ಯೋಜನೆಯ ಅವಧಿ : 5 ವರ್ಷ 
ಯೋಜನೆಯ ಗುರಿ : 100 ಪುಸ್ತಕ 
ಯೋಜನೆಯ  ಅಂದಾಜು  ವೆಚ್ಚ : ಸುಮಾರು 40 ಲಕ್ಷ
ಯಾರು ಅರ್ಹರು : ಸೃಜನಶೀಲ ಬರಹಗಾರು 
ಸಾಹಿತ್ಯ ಪ್ರಕಾರ :  ಕತೆ -  ಕಾದಂಬರಿ, ಕವಿತೆ, ಪ್ರಬಂಧ, ನಾಟಕ ಕೃತಿ ಇತ್ಯಾದಿ
ಅನುದಾನ ಪ್ರಕ್ರಿಯೆ: ಆಯ್ಕೆ ಸಮಿತಿಯ ಅವಗಾಹನೆಗೆ ಸಲ್ಲಿಸಲು ನಿಯತಕಾಲಿಕವಾಗಿ ಹಸ್ತ ಪ್ರತಿಗಳನ್ನು ಆಹ್ವಾನಿಸಲಾಗುವುದು.

Similar News