ಮಂಗಳೂರು: ಅಂತರ್ ಜಿಲ್ಲಾ ಮನೆ ಕಳ್ಳತನದ ಆರೋಪಿ ಸೆರೆ: 15 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ
ಮಂಗಳೂರು, ಎ.17: ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದ ಆರೋಯೊಬ್ಬನನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಂಧಿತ ಆರೋಪಿಯ ಬಗ್ಗೆ ಮಾಹಿತಿ ನೀಡಿದರು .
ಮೈಸೂರಿನ ಹೂಟಗಳ್ಳಿಯ ನಿವಾಸಿ ಸಿದ್ದರಾಜು(52) ಬಂಧಿತ ಆರೋಪಿ.
ಸಿಸಿಬಿ ಪೊಲೀಸರು ಬಂಧಿತ ಆರೋಪಿಯಿಂದ ಸುಮಾರು 15 ಲಕ್ಷ ರೂ. ಮೌಲ್ಯದ 27 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಹೀರೊ ಹೊಂಡಾ ಪ್ಲಸ್ ಮೋಟಾರ್ ಸೈಕಲ್ ಹಾಗೂ 2 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸಿದ್ದರಾಜು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ,ಉಡುಪಿಯ ಮಣಿಪಾಲ, ಕಾರ್ಕಳ,ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಹರಿಹರಪುರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿರುವುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿ ಸಿದ್ದರಾಜು ಯಾನೆ ಮೂರ್ತಿ ಯಾನೆ ಸೋನುರಾಜ್ ಯಾನೆ ಸುಂದರ್ ರಾಜ್ ಯಾನೆ ಸಿದ್ಧ ರೌಡಿ ಯಾನೆ ಸಿದ್ದು ಜ್ಞಾನ ಮೂರ್ತಿ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿಯು ಮಂಗಳೂರು ನಗರ, ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು, ಶಿವಮೊಗ್ಗ ಜಿಲ್ಲೆ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು 8 ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿದ್ದು, ಮಂಗಳೂರಿನಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಕಳ್ಳತನ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಒಟ್ಟು 13 ಪ್ರಕರಣಗಳಲ್ಲಿ ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಮಂಗಳೂರಿನಲ್ಲಿ ಮನೆ ಕಳ್ಳತನ ನಡೆಸಲು ಯತ್ನಿಸಿದ ವೇಳೆವ ಆರೋಪಿಯು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯು ಆತನ ಸಹಚರನಾದ ಹಾಸನ ಜಿಲ್ಲೆಯ ಅರಕಲಗೂಡಿನ ಪುನೀತ್ ಎಂಬಾತನೊಂದಿಗೆ ಸೇರಿಕೊಂಡು ಹಲವಾರು ಕಡೆವ ಯಾರೂ ಇಲ್ಲದ ಮನೆಯ ಬೀಗ ಒಡೆದು ಚಿನ್ನಾಭರಣಗಳನ್ನು ಕಳವು ಮಾಡಿರುತ್ತಾನೆ. ಈತನು ಕಳವು ಮಾಡಿದ ಮನೆಯ ಕಳ್ಳತನ ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿತರು ಮೈಸೂರು ನಗರ ವಿಜಯ ನಗರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ 2005ರಲ್ಲಿ ಗಂಗಮ್ಮ ಎಂಬ ಮಹಿಳೆಯನ್ನು ಮೈಸೂರಿನ ಮಂಟೆಲಿಂಗಯ್ಯ ಮತ್ತು ಇತರ ಆರೋಪಿಗಳೊಂದಿಗೆ ಸೇರಿಕೊಂಡು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕಬಿನಿ ನದಿಗೆ ಬಿಸಾಡಿರುವ ಆರೋಪದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಈ ಪ್ರಕರಣ ದಾಖಲಾದ ಸಮಯ ಅತನ ಹೆಸರು ರೌಡಿ ಸಿದ್ದ ಎಂಬುದಾಗಿ ಇದ್ದು, ಈತನು ಕೊಲೆ ಪ್ರಕರಣದಲ್ಲಿ ದಸ್ತಗಿರಿ ಆಗಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ2006ರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನು. ಕೂಲೆ ಪ್ರಕರಣದಲ್ಲಿ ಈತನೊಂದಿಗೆ ಇದ್ದ ಇತರ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿತ್ತು ಎಂದು ತಿಳಿಸಿದರು.
ಆರೋಪಿಯು ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಪೊಲೀಸರಿಂದ ದಸ್ತಗಿರಿಯಾಗಿದ್ದು ಜಾಮೀನಿನಲ್ಲಿ ಬಿಡುಗಡೆಯಾಗಿದ್ದನು ಎಂದರು.
ಆರೋಪಿ ವಿರುದ್ಧ ಮೈಸೂರು ನಗರದ ಮೇಟಗಳ್ಳಿ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ನಜರ್‌ಬಾದ್ ಮತ್ತು ಅಶೋಕ್‌ಪುರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ಮತ್ತು ಮನೆ ಕಳ್ಳತನ, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ,ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಮತ್ತು ಕಳವು ಪ್ರಕರಣ ದಾಖಲಾಗಿದ್ದು, ಈತನ ವಿರುದ್ಧ ಮೇಟ್ಗಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿರುತ್ತದೆ. ಈತನು ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಬಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಎಸ್ಕೇಪ್ ಪ್ರಕರಣ ದಾಖಲಾಗಿರುತ್ತದೆ. ಈ ಎಲ್ಲಾ ಪ್ರಕರಣಗಳಲ್ಲಿ ಅರೋಪಿ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ತಲೆಮರೆಸಿಕೊಂಡಿರುವ ಒಟ್ಟು12 ಎಲ್‌ಪಿಸಿ. ವಾರಂಟ್ ಇರುತ್ತದೆ ಎಂದು ಮಾಹಿತಿ ನೀಡಿದರು.
ಆರೋಪಿ ವಿರುದ್ಧ ಈವರೆಗೆ ದಾಖಲಾದ ಪ್ರಕರಣಗಳ ವಿವರ ಮಂಗಳೂರು ನಗರದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 1 ಪ್ರಕರಣ ಹಾಗೂ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ 10 ಠಾಣೆಗಳಲ್ಲಿ ಕೊಲೆ, ಅತ್ಯಾಚಾರ, ಕೊಲೆ ಯತ್ನ ಹಾಗೂ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು 14 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 3ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 3 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯಲ್ಲಿ 4 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 8 ಪ್ರಕರಣಗಳು, ಹಾಸನ ಜಿಲ್ಲೆಯಲ್ಲಿ 2 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 22 ಪ್ರಕರಣಗಳು ಸೇರಿದಂತೆ ಒಟ್ಟು 30 ಪ್ರಕರಣಗಳು ದಾಖಲಾಗಿರುತ್ತವೆ ಎಂದರು.
ಮಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಪಿ ಎ ಹೆಗಡೆ ನಿರ್ದೇಶನದಲ್ಲಿ ಸಿಸಿಬಿ ಘಟಕದ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ ಹಾಗೂ ಪಿಎಸ್‌ಐಗಳಾದ ಸುದೀಪ್ ಎಂ ವಿ ಮತ್ತು ಎಎಸ್‌ಐ ಶಶಿಧರ ಶೆಟ್ಟಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆಯುಕ್ತ ಕುಲದೀಪ್ ಕುಮಾರ್ ಜೈನ್ 10 ಸಾವಿರ ರೂ.ನಗದು ಬಹುಮಾನ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಮತ್ತುಎಸಿಪಿ ಪಿ.ಎ.ಹೆಗಡೆ ಉಪಸ್ಥಿತರಿದ್ದರು.