ಗಾಂಧೀಜಿಯ ಹಿಂದೂಧರ್ಮ ಬೇಕೋ ಗೋಡ್ಸೆಯ ಹಿಂದುತ್ವ ಬೇಕೋ ಎಂಬ ಕವಲು ದಾರಿಯಲ್ಲಿ ರಾಷ್ಟ್ರ ನಿಂತಿದೆ: ಬಿ.ಕೆ. ಹರಿಪ್ರಸಾದ್
ಭಟ್ಕಳ: ಮಹಾತ್ಮ ಗಾಂಧೀಜಿಯನ್ನು ಕೊಂದ ಗೋಡ್ಸೆಯ ಹಿಂದುತ್ವ, ಸರ್ವಧರ್ಮ ಸಮಾಭಾವ ಸಾರಿದ ಗಾಂದೀಜಿಯವರ ಹಿಂದೂ ಧರ್ಮ ಇವೆರಡರ ನಡುವೆ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಕವಲು ದಾರಿಯಲ್ಲಿ ರಾಷ್ಟ್ರ ನಿಂತುಕೊಂಡಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಅವರು ಬುಧವಾರ ರಾತ್ರಿ ಮುರುಢೇಶ್ವರದ ಬೀನಾ ವೈದ್ಯ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ನಾಮಧಾರಿ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ್ದ ಚುನಾವಣ ಪ್ರಚಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
75 ವರ್ಷಗಳ ಕಾಲ ನಾವು ಯಾವುದೇ ಬೇಧಭಾವ ಇಲ್ಲದೆ ಅಣ್ಣತಮ್ಮಂದಿರರಂತೆ ಬದುಕಿ ಬಾಳಿದ್ದೇವೆ. ನಿಮಗೆ ಆ ಸಿದ್ಧಾಂತ ಬೇಕೆ ಅಥವಾ ಗಾಂಧೀಜಿಯನ್ನು ಕೊಂದ ನಾಥೋರಾಂ ಗೋಡ್ಸೆಯ ಸಿದ್ಧಾಂತ ಬೇಕೆ ? ಈಗ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ? ದುರ್ಬಲ ವರ್ಗದವರನ್ನು ತುಳಿದು ರಾಜಕೀಯ ಮಾಡುವಂತಹದ್ದು ಬಿಜೆಪಿಯ ಕರ್ಮವಾಗಿದೆ. ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿದ್ದ ಮಹಾತ್ಮಗಾಂಧಿ, ವಿವೇಕಾನಂದ, ಗುರುನಾನಕ ಮುಂತಾದವರು ಹಿಂದೂ ಧರ್ಮದ ಪರಿಪಾಲಕರು. ಹಿಂದೂತ್ವವನ್ನು ಮಾಡಿದಂತಹವರು ಸಾರ‍್ಕರ್, ಗೋಡ್ಸೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರು. ಬಿಜೆಪಿ ಪಕ್ಷದಲ್ಲಿ ಯಾವ ರೀತಿಯ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.
ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ ಮಾತನಾಡಿ, ನಮ್ಮ ಸಮಾಜ ಕಷ್ಟದಲ್ಲಿದ್ದಾಗ ಬೆಂಬಲಿಸಿ ಅವರ ಕಣ್ಣೀರು ಒರೆಸಿದಂತಹ ಅವರನ್ನು ಸಹಾಯ ಮಾಡಿದ ವ್ಯಕ್ತಿಯನ್ನು ನಾವೆಂದೂ ಕೈ ಬಿಡುವುದಿಲ್ಲ. ಅವರ ಬೆನ್ನಿಗಿದ್ದೇವೆ ಅವರನ್ನು ಬೆಂಬಲಿಸುತ್ತೇವೆ ಎಂಬ ಸಂದೇಶವನ್ನು ನಾನು ಈ ವೇದಿಕೆಯ ಮೂಲಕ ಸಮಾಜಕ್ಕೆ ನೀಡುತ್ತಿದ್ದೇನೆ ಎಂದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಮಾಂಕಾಳ್ ಎಸ್. ವೈದ್ಯ ಪರ ಮಾತನಾಡಿದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ಮಹಿಳಾ ಕಾಂಗ್ರೇಸ್ ಮುಖಂಡೆ ನಯನಾ ನಾಯ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.