ಮಲ್ಪೆ ಬಂದರಿನಲ್ಲಿ ಪ್ರಸಾದ್‌ರಾಜ್ ಕಾಂಚನ್ ಮತಯಾಚನೆ
ಬಿಜೆಪಿ ಸರಕಾರದ ವಿರುದ್ಧ ಮೀನುಗಾರ ಮಹಿಳೆಯರ ಆಕ್ರೋಶ
ಉಡುಪಿ: ಮಲ್ಪೆ ಬಂದರಿನಲ್ಲಿ ಇಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಮತಯಾಚನೆಗೆ ತೆರಳಿದಾಗ ಮೀನುಗಾರ ಮಹಿಳೆಯರು ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
‘ಬಿಜೆಪಿಯವರು ಈವರೆಗೆ ನಮಗೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ನಾವು ಯಾರಿಗೂ ಹೆದರುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಮಗೆ ಸೊಸೈಟಿಯಿಂದ ಎಲ್ಲ ಪಡಿತರ ಸಿಗುತ್ತಿತ್ತು. ಈಗ ಅಕ್ಕಿ ಬಿಟರೆ ಏನು ಇಲ್ಲ’ ಎಂದು ಮೀನುಗಾರ ಮಹಿಳೆಯರು ಆರೋಪಿಸಿದರು.
‘ಬಂಗಾರ ಬೆಲೆ ಏರಿಕೆಯಾಗಿದೆ. ಇದರಿಂದ ಬಡವರು ಮದುವೆ ಹೇಗೆ ಮಾಡುವುದು. ಅಕ್ಕಿ, ಗ್ಯಾಸ್, ಉಪ್ಪಿಗೂ ಬೆಲೆ ಜಾಸ್ತಿಯಾಗಿದೆ. ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತಿದೆ. ಬಿಜೆಪಿಯಿಂದ ಯಾವುದೇ ಪ್ರಯೋಜನ ಇಲ್ಲ. ಹಣ ಇದ್ದವರು ಬದುಕುತ್ತಾರೆ. ಬಡವರು ಏನು ಮಾಡಬೇಕು. ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ಬಂದಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಪ್ರಸಾದ್‌ರಾಜ್ ಕಾಂಚನ್, ಮೀನುಗಾರರು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಬಂದರಿ ನಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಬಂದರಿನಲ್ಲಿ ಡ್ರಜ್ಜಿಂಗ್ ಆಗದೆ ಐದಾರು ವರ್ಷಗಳಾಗಿವೆ. ಬಿಜೆಪಿ ಪಕ್ಷ ಮೀನು ಗಾರರಿಂದ ಮತ ಪಡೆದು ಮೋಸ ಮಾಡಿದೆ. ಇದೆನ್ನೆಲ್ಲ ಮುಂದೆ ಅವಕಾಶ ಸಿಕ್ಕರೆ ನಾನು ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಉಸ್ತುವಾರಿ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.