ಕಾಸರಗೋಡು: ಲುಕ್ ಔಟ್ ನೋಟಿಸ್ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

Update: 2023-05-04 12:25 GMT

ಕಾಸರಗೋಡು: ಸೈಬರ್ ದಾಳಿಗೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಪಟ್ಟ ಆರೋಪಿ ಕಾಸರಗೋಡಿನ ವಸತಿ ಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕೊಟ್ಟಾಯಂ ಕೋದನಲ್ಲೂರಿನ ಅರುಣ್ ವಿದ್ಯಾಧರನ್ (32) ಮೃತಪಟ್ಟ ಯುವಕ. ಕಾಞ೦ಗಾಡ್‌ನ ವಸತಿ ಗೃಹವೊಂದರಲ್ಲಿ ಗುರುವಾರ ಮಧ್ಯಾಹ್ನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋದನಲ್ಲೂರಿನ ಆದಿರಾ ಮುರಳೀಧರನ್ (26) ಎಂಬಾಕೆಯ ಆತ್ಮಹತ್ಯೆ ಬಳಿಕ ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಆರೋಪಿ ಕೇರಳ ಬಿಟ್ಟು ಪರಾರಿಯಾಗಿದ್ದಾಗಿ ಮೊಬೈಲ್ ಟವರ್ ಲೊಕೇಶನ್ ನಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಕೊಯಂಬತ್ತೂರಿಗೂ ತೆರಳಿ ಪೊಲೀಸರು  ಶೋಧ ನಡೆಸಿದ್ದರು. ಆರೋಪಿಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದರು.

ಈತ ಫೈನಾಪಲ್ ವ್ಯಾಪಾರಿ, ಮಲಪ್ಪುರಂ ಪೆರಿಂದಲ ಮಣ್ಣದ ರಾಜೇಶ್ ಕುಮಾರ್ ಎಂಬ ನಕಲಿ ವಿಳಾಸ ನೀಡಿ ಮೇ 2ರಂದು  ವಸತಿ ಗೃಹದಲ್ಲಿ ಕೊಠಡಿ ಪಡೆದಿದ್ದು, ಕೊಠಡಿಯಿಂದ ಮತದಾರ ಚೀಟಿ, ಡ್ರೈವಿಂಗ್ ಲೈಸನ್ಸ್  ಪತ್ತೆಯಾಗಿದ್ದು, ಇದರಿಂದ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಎ. 30ರಂದು ಕೊಟ್ಟಾಯಂ ಕಡತುರುತ್ತಿ ಕೋದನಲ್ಲೂರಿನ ಆದಿರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನು. ಹೀಗಾಗಿ ಆದಿರಾ ಅವರು ಅರುಣ್ ಜೊತೆಗಿನ ಸ್ನೇಹವನ್ನು ತ್ಯಜಿಸಿದ್ದರು. ಅದಿರಾಗೆ ಮದುವೆ ಪ್ರಸ್ತಾಪ ಬರುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದ ಅರುಣ್, ಸೋಷಿಯಲ್ ಮೀಡಿಯಾ ಮೂಲಕ ಅದಿರಾಳನ್ನು ನಿಂದಿಸಿ, ಫೇಸ್ಬುಕ್‌ ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್ ಮಾಡಿ ಮಾನಹಾನಿಕರವಾಗಿ ಬರಹಗಳನ್ನು ಹಾಕಿದ್ದು, ಇದರ ಬಗ್ಗೆ ಅದಿರಾ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆಕೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.

Similar News