ಮೇ 7ರಂದು ಕರಾವಳಿಗೆ ಪ್ರಿಯಾಂಕಾ ಗಾಂಧಿ ಭೇಟಿ
ಮಂಗಳೂರು: ಕರಾವಳಿಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮೇ 7ರಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಆಗಮಿಸಲಿದ್ದಾರೆ.
ಅವರು ಮುಲ್ಕಿ ಕೊಲ್ನಾಡು ಮೈದಾನದಲ್ಲಿ ಅಪರಾಹ್ನ ಒಂದು ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಮೂಡಬಿದ್ರೆ ಕ್ಷೇತ್ರ, ಕಾಪು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 50 ಸಾವಿರ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಡಬ್ಬಲ್ ಇಂಜಿನ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅಗತ್ಯವಿಲ್ಲ. ಒಂದು ಇಂಜಿನ್ ಕೆಟ್ಟಾಗ ಡಬ್ಬಲ್ ಇಂಜಿನ್ ನ ಅಗತ್ಯ ವಿರುತ್ತದೆ. ಈ ರಾಜ್ಯ ದಲ್ಲಿ ಸಾಕಷ್ಟು ಉತ್ತಮ ಆಡಳಿತ ನೀಡಿ ಮುನ್ನಡೆಸಿದ ಮುಖ್ಯಮಂತ್ರಿಗಳು, ನಾಯಕರು ವಿವಿಧ ಪಕ್ಷಗಳಲ್ಲಿ ಇದ್ದಾರೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ರಾಜ್ಯದ ಸಣ್ಣಪುಟ್ಟ ವಿಚಾರಗಳ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡುವ ಪ್ರಧಾನಿ ಮೋದಿ ಲೈಂಗಿಕ ದೌರ್ಜನ್ಯ ನಡೆದಿರುವ ಕುಸ್ತಿ ಪಟುಗಳು ನ್ಯಾಯಕ್ಕಾಗಿ ಸತ್ಯಾಗ್ರಹ ನಡೆಸುತ್ತಿರುವ ದೇಶಕ್ಕಾಗಿ ಪದಕ ವಿಜೇತ ಕುಸ್ತಿ ಪಟುಗಳ ಬಗ್ಗೆ ಮೌನ ವಹಿಸಿದ್ದಾರೆ. ಆರೋಪ ಹೊತ್ತಿರುವ ತಮ್ಮ ಪಕ್ಷದ ಸಂಸದನ ವಿರುದ್ಧ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.
ಈ ಬಾರಿ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. ಕರಾವಳಿಯ ಭಾಗಕ್ಕೆ ರೂಪಿಸಲಾದ ಪ್ರಣಾಳಿಕೆಯ ಹತ್ತು ಅಂಶಗಳನ್ನು 5 ಗ್ಯಾರಂಟಿ ಗಳೊಂದಿಗೆ ಈಡೇರಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಚರಣ್ ಸಿಂಗ್ ಸಪ್ರಾ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಮುಖಂಡ ಡಾ.ಅಜಯ ಕುಮಾರ್, ಪದ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.