ನಕಲಿ ಮತದಾನ ಆರೋಪ | ಮಿಯ್ಯಾರಿನಲ್ಲಿ ಪೊಲೀಸ್-ಕಾಂಗ್ರೆಸ್ ಮಧ್ಯೆ ವಾಗ್ವಾದ: ಸುನೀಲ್ ಕುಮಾರ್ ವಿರುದ್ಧ ಘೋಷಣೆ

Update: 2023-05-11 05:49 GMT

ಕಾರ್ಕಳ, ಮೇ 11: ಕಾರ್ಕಳ ವಿಧಾನಸಭಾ ಕ್ಷೇತ್ರದ ಮಿಯ್ಯಾರು ಗ್ರಾಮದ ಸಮಾಜ ಮಂದಿರ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾ.10ರಂದು ರಾತ್ರಿ ವೇಳೆ ಮತಗಟ್ಟೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

 ದುಬೈಯಲ್ಲಿರುವ ಸುಹಾಸ್ ಎಂಬ ಮತದಾರ ಹೆಸರಿನಲ್ಲಿ 18 ವರ್ಷ ತುಂಬಿರದ ಅಪ್ರಾಪ್ತ ವಯಸ್ಸಿನ ಧೀರಜ್ ಎಂಬಾತ ಮತದಾನ ಮಾಡಿರುವುದಾಗಿ ದೂರಲಾಗಿದೆ. ಈ ಮಾಹಿತಿ ಹರಡುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಮುಂದೆ ಜಮಾಯಿಸಿ, ಸಚಿವ ಸುನೀಲ್ ಕುಮಾರ್ ವಿರುದ್ಧ ಘೋಷಣೆ ಕೂಗಿದರು.

ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮತಯಂತ್ರ ಸಾಗಿಸುವ ಬಸ್ ಮುಂದೆ ಸಾಗದಂತೆ ತಡೆಯಲಾಯಿತು. ಈ ಸಂದರ್ಭ ಪೊಲೀಸರು ಲಾಠಿ ಬೀಸಿ ಕಾಂಗ್ರೆಸ್ ಕಾರ್ಯಕರ್ತ ರನ್ನು ಚದುರಿಸಿದರು.

ಸ್ಥಳಕ್ಕೆ ಆಗಮಿಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಕಾಯಕರ್ತರನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ಈ ವೇಳೆ ಮಾತನಾಡಿದ ಅವರು, ಈ ಸಂಬಂಧ ನಾವು ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ನಕಲಿ ಮತದಾನ ಮಾಡಿರುವ ಬಾಲಕನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಈ ಗಂಭೀರ ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸುವ ವಿಶ್ವಾಸ ನಮಗೆ ಇದೆ. ಸತ್ಯಕ್ಕೆ ಜಯ ಸಿಗಲಿದೆ ಎಂದರು.

ಬಿಎಲ್‌ಓ ಚೀಟಿ ಬದಲು ಕೈಯಲ್ಲಿ ಬರೆದ ಚೀಟಿ ನೋಡಿ ಮತಗಟ್ಟೆ ಒಳಗೆ ಬಿಟ್ಟಿದ್ದಾರೆ. ಇದು ಒಂದು ನಕಲಿ ಮತದಾನ ಅಲ್ಲ, ಕ್ಷೇತ್ರದ ಎಲ್ಲ 209 ಮತಗಟ್ಟೆಯಲ್ಲೂ ಅಕ್ರಮ ಮತದಾನ ಆಗಿರುವ ಬಗ್ಗೆ ನಮಗೆ ಸಂಶಯ ಕಾಡುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿ ನಮ್ಮ ಕಾರ್ಕಳದಲ್ಲಿದ್ದರೆ ಇನ್ನು ದೇಶದ ಪರಿಸ್ಥಿತಿ ಹೇಗಿರಬಹುದು. ಇಲ್ಲಿ ಗಲಾಟೆ ಆಗಲು ನೇರವಾಗಿ ಸಚಿವ ಸುನೀಲ್ ಕುಮಾರ್ ಅವರೇ ಕಾರಣ. ಅವರ ಕುಮ್ಮಕ್ಕಿನಿಂದಲೇ ಇದು ನಡೆದಿದೆ. ಮೂರು ಬಾರಿ ಶಾಸಕರಾದವರು, ಸಚಿವರಾದ ಇವರಿಗೆ ಈ ರೀತಿ ಅಕ್ರಮ ಮತದಾನ ಮಾಡಿ ಗೆಲ್ಲಬೇಕೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ನಮ್ಮ ಬಗ್ಗೆ ಇವರಿಗೆ ಯಾಕೆ ಭಯ ಎಂದು ಅವರು ಟೀಕಿಸಿದರು.

Similar News