ಭಟ್ಕಳದಲ್ಲಿ ಹಾರಿಸಿದ್ದು ಪಾಕಿಸ್ತಾನದ ಧ್ವಜವಲ್ಲ: ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

Update: 2023-05-13 16:48 GMT

ಭಟ್ಕಳ: ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಲು ಕಾಂಗ್ರೆಸ್ ಬೆಂಬಲಿಗರು ಭಟ್ಕಳ ಶಂಶುದ್ದೀನ್ ವೃತ್ತದ ಬಳಿ ಹಸಿರು ಹಾಗೂ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ನೆರೆದಿದ್ದರು. 

ಆದರೆ, ಆ ಘಟನೆಯ ಚಿತ್ರಗಳು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, "ಕಾಂಗ್ರೆಸ್ ಬೆಂಬಲಿಗರು 'ಮುಸ್ಲಿಂ ಧ್ವಜ' ಹಿಡಿದುಕೊಂಡಿದ್ದರು" ಎಂದು ಕೆಲವರು ಹೇಳಿದರೆ , ಮತ್ತೆ ಕೆಲವರು "ಪಾಕಿಸ್ತಾನ ಧ್ವಜ ಹಿಡಿದುಕೊಂಡಿದ್ದರು" ಎಂದೂ ವಾದಿಸಿದ್ದರು.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಕಾಂಗ್ರೆಸ್ ಬೆಂಬಲಿಗರು ಬಳಸಿದ್ದು ಪಾಕಿಸ್ತಾನ ಧ್ವಜವಲ್ಲ.  ಅದು ಕೆಲವು ವ್ಯಕ್ತಿಗಳು ವೈಯಕ್ತಿಕವಾಗಿ ಪ್ರದರ್ಶಿಸಿದ್ದ ಧಾರ್ಮಿಕ ಧ್ವಜವಾಗಿತ್ತು ಎಂದು ಹೇಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅದು ಪಾಕಿಸ್ತಾನ ಧ್ವಜವಲ್ಲ ಎಂದು ದೃಢಪಡಿಸಿರುವುದರಿಂದ ಯಾವುದೇ ದೂರನ್ನು ದಾಖಲಿಸಿಕೊಳ್ಳಲಾಗಿಲ್ಲ ಅಥವಾ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದೂ ತಿಳಿಸಿದ್ದಾರೆ.

ವಾರ್ತಾಭಾರತಿಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಬಾರದು  ಹಾಗೂ ಈ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಾಕ್ಷ್ಯಾಧಾರವಿಲ್ಲದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು  ಎಂದು ಮನವಿ ಮಾಡಿದ್ದಾರೆ. 

“ಅದೊಂದು ಧಾರ್ಮಿಕ ಧ್ವಜವಾಗಿದೆ ಮತ್ತು ಪಾಕಿಸ್ತಾನ ಧ್ವಜವಲ್ಲ. ನಾವಿದನ್ನು ದೃಢಪಡಿಸಿದ್ದು, ಯಾವುದೇ ಬಗೆಯ ಕೋಮು ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ತಪ್ಪು ದಾರಿಗೆಳೆಯುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಕೂಡದು ಎಂದು ಮನವಿ ಮಾಡುತ್ತೇವೆ” ಎಂದೂ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಟ್ಕಳ ಮಜ್ಲಿಸ್-ಎ-ಇಸ್ಲಾಹ್  ವ ತಂಝೀಮ್‍ನ ರಾಜಕೀಯ ಘಟಕದ ಸಂಚಾಲಕ ಇಮ್ರಾನ್ ಲಂಕಾ, " ಕೆಲವು ಪಕ್ಷ ಸಂಘಟನೆಗಳಿಗೆ ಧ್ವಜಗಳಿರುತ್ತವೆ.ಆದರೆ ಇಸ್ಲಾಮ್ ಧರ್ಮಕ್ಕೆ ಯಾವುದೇ ಧ್ವಜ ಇಲ್ಲ. ಹಾಗೆಯೇ ಮುಸ್ಲಿಮ್  ಸಮಾಜಕ್ಕೂ ಯಾವುದೇ ಧ್ವಜ ಇಲ್ಲ. ಆದ್ದರಿಂದ ಯಾವುದೇ ನಿರ್ದಿಷ್ಟ ಧ್ವಜವನ್ನು ಇಸ್ಲಾಮ್ ಧರ್ಮದ ಧ್ವಜ ಅಥವಾ ಮುಸ್ಲಿಮ್  ಸಮಾಜದ ಧ್ವಜ ಎಂದು ಕರೆಯುವುದು ತಪ್ಪು ಮತ್ತ್ತು ಖಂಡನೀಯ. ಸುಳ್ಳನ್ನು ಹರಡುವ ಮೂಲಕ ಕೆಲವು ಕಿಡಿಗೇಡಿ ಶಕ್ತಿಗಳು ಆ ಸಂದರ್ಭಕ್ಕೆ ಕೋಮುವಾದಿ ತಿರುವು ನೀಡಲು ಪ್ರಯತ್ನಿಸುತ್ತಿವೆ " ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯರ  ಪ್ರಕಾರ, ಕಾಂಗ್ರೆಸ್ ಗೆಲುವಿನಲ್ಲಿ  ಹಿಂದೂ ಹಾಗೂ ಮುಸ್ಲಿಂ ಒಗ್ಗಟ್ಟನ್ನು ಪ್ರದರ್ಶಿಸಲು ಸಮಾವೇಶಕ್ಕೆ ಮುಸ್ಲಿಂ ಬೆಂಬಲಿಗರು ಹಸಿರು ಧ್ವಜ ಹಾಗೂ ಹಿಂದೂ ಬೆಂಬಲಿಗರು ಕೇಸರಿ ಧ್ವಜ ತಂದಿದ್ದಾರೆ. ವಾಸ್ತವವಾಗಿ  ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನಲ್ಲಿ ಎರಡು ಸಮುದಾಯಗಳೂ ಸಮಾನ ಪಾತ್ರ ನಿರ್ವಹಿಸಿವೆ ಎಂದು ತೋರಿಸಲು ಹಾಗೆ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Similar News