ಕರಾವಳಿಯಲ್ಲಿ ಭಾರೀ ಗಾಳಿ-ಮಳೆಯ ಮುನ್ಸೂಚನೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ
ಉಡುಪಿ, ಜೂ.6: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗಿದ್ದು, ಇದರಿಂದ ರಾಜ್ಯದ ಪಶ್ಚಿಮದ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಸಮುದ್ರ ಪ್ರಕ್ಷುಬ್ಧವಾಗಿರಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾಮ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಂಡಮಾರುತದ ಚಲನೆಯ ಕಾರಣದಿಂದ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುವ ಸಂಭವವಿದ್ದು, ಭಾರೀ ಮಳೆಯೂ ಸುರಿಯುವ ಸಾಧ್ಯತೆ ಇದೆ. ಆದುದರಿಂದ ಈ ಅವಧಿಯಲ್ಲಿ ಮೀನುಗಾರರು ಮೀನುಗಾರಿಕೆ ಗಾಗಿ ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಜಿಲ್ಲಾಡಳಿತದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕ ರಿಗೆ ಕೆಲವು ಸೂಚನೆಗಳನ್ನು ನೀಡಿದ್ದು, ಅದನ್ನು ಪಾಲಿಸುವಂತೆ ತಿಳಿಸಲಾಗಿದೆ.
ಸಾರ್ವಜನಿಕರು, ಪ್ರವಾಸಿಗರು ಸಮುದ್ರ, ನದಿ ತೀರ ಪ್ರದೇಶಗಳಲ್ಲಿ ನೀರಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸು ವಂತೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಕರು ಸಮುದ್ರ ತೀರ, ಅಪಾಯಕಾರಿ ವಿದ್ಯುತ್ಕಂಬ, ಕಟ್ಟಡ, ಮರಗಳ ಬಳಿ, ಕೆಳಗೆ ನಿಲ್ಲದಂತೆ ಎಚ್ಚರಿಸಲಾಗಿದೆ. ನೆರೆ ಬರುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಿದ್ಧವಾಗಿರಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ವಿಪತ್ತನ್ನು ಎದುರಿಸಲು, ನಿಭಾಯಿಸಲು ತಯರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಮ್‌ನ ದಿನದ 24 ಗಂಟೆಯೂ ಕಾರ್ಯಾ ಚರಿಸುವ ದೂರವಾಣಿ ಸಂಖ್ಯೆ: 0820-2574802 ಅಥವಾ ಟೋಲ್‌ಫ್ರಿ ನಂ. 1077ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ವಾಯುಭಾರ ಕುಸಿತ: ಸೋಮವಾರ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಕಂಡು ಬಂದಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಇಂದು ಮುಂಜಾನೆಯ ವೇಳೆಗೆ ಅದು ಗೋವಾ ದಿಂದ 920ಕಿ.ಮೀ., ಮುಂಬೈಯಿಂದ 1120ಕಿ.ಮೀ. ಹಾಗೂ ಪೋರ್ ಬಂದರ್‌ನಿಂದ 1160 ಕಿ.ಮೀ. ದೂರದಲ್ಲಿತ್ತು.
ಇದು ಇನ್ನಷ್ಟು ತೀವ್ರಗೊಂಡು ಮುಂದಿನ 24 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ. ಇದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆ ಬರುವ ಸಾಧ್ಯತೆ ಇದೆ. ರಾಜ್ಯದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ ಬಂದರುಗಳಲ್ಲಿ ಎಚ್ಚರಿಕೆಯ ಸೂಚನೆಯನ್ನು ನೀಡುವಂತೆ ಹವಾಮಾನ ಇಲಾಖೆ ತಿಳಿಸಿದೆ.