ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡದ ಓರ್ವ ಸಮುದ್ರಪಾಲು, ಇಬ್ಬರ ರಕ್ಷಣೆ

Update: 2023-06-12 16:30 GMT

ಭಟ್ಕಳ: ಇಲ್ಲಿನ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡವೊಂದು ಸೋಮವಾರ ಕಡಲಿನಲ್ಲಿ ಇಳಿದಾಗ ಓರ್ವ ಪ್ರವಾಸಿಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನಿವಾಸಿಗಳ 22 ಜನರ ಗುಂಪೊಂದು ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಸೋಮವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು. ಸಮುದ್ರದ ಆಳೆತ್ತರ ಅಲೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಆಟವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.

ಹಸನ್ ಮಜಗಿಗೌಡ (21) ಹಾಗೂ ಸಂಜೀವ ಹೆಬ್ಬಳ್ಳಿ (20) ಎನ್ನುವವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಸಂತೋಷ ಹುಲಿಗುಂಡೆ (19) ಎನ್ನುವ ಯುವಕ ನೀರಿನಲ್ಲಿ ಕಣ್ಮರೆಯಾದ ಕಾರಣ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಜೀವರಕ್ಷಕ ಸಿಬ್ಬಂದಿ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಬಿಪರ್‌ಜೋಯ್ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಚಂಡಮಾರುತದ ಸಮಯದಲ್ಲಿ ಸಮುದ್ರಕ್ಕೆ ಸಮೀಪಿಸದಂತೆ  ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮುಡೇಶ್ವರಕ್ಕೆ ಬರುವ ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಈ ಮುನ್ನೆಚ್ಚರಿಕೆಗಳ ನಡುವೆಯೂ ಸೋಮವಾರ ಮುರ್ಡೇಶ್ವರದಲ್ಲಿ ಅರೇಬಿಯನ್ ಸಮುದ್ರದ ಎತ್ತರದ ಅಲೆಗಳಿಗೆ ಒಬ್ಬ ಪ್ರವಾಸಿಗರು ಕೊಚ್ಚಿಹೋದ ದಾರುಣ ಘಟನೆ ಸಂಭವಿಸಿದೆ.  ಅದೃಷ್ಟವಶಾತ್, ಇಬ್ಬರು ಪ್ರವಾಸಿಗರನ್ನು ಜೀವರಕ್ಷಕರು ಯಶಸ್ವಿಯಾಗಿ ರಕ್ಷಿಸಿದ್ದಾರೆ. 

Similar News