ಮಲ್ಪೆ ಬಂದರಿನ ಬಳಿ ಔಟರ್ ಹಾರ್ಬರ ನಿರ್ಮಾಣಕ್ಕೆ ಒತ್ತಾಯ
ಮಲ್ಪೆ, ಜೂ.13: ಮಲ್ಪೆ ಬಂದರಿನ ಪಶ್ಚಿಮ ಭಾಗದಲ್ಲಿ 5000 ಬೋಟ್ ಗಳನ್ನು ನಿಲ್ಲಿಸಲು ಅನುಕೂಲವಾಗು ವಂತೆ ಔಟರ್ ಹಾರ್ಬರ ನಿರ್ಮಿಸಬೇಕು ಎಂದು ಮೀನುಗಾರ ಮುಖಂಡರು ಮಂಗಳವಾರ ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ನಡೆದ ಮೀನುಗಾರಿಕೆ ಇಲಾಖೆ, ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಮಾಲೋಚನೆ ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಪಡುಕರೆ ಭಾಗದಲ್ಲಿ ಜೆಟ್ಟಿ ವಿಸ್ತರಣೆ ಪ್ರಸ್ತಾವನೆ ಇದ್ದು ಶೀಘ್ರ ಅನುಷ್ಠಾನ ಮಾಡಬೇಕು. ನಾಡದೋಣಿ ಗಳಿಗೆ ಪ್ರತ್ಯೇಕ ತಂಗುದಾಣ, ಬಂದರಿನಲ್ಲಿ ಬಹು ಅಂತಸ್ತಿನ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಬೇಕು. ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಬಂದರು ಸ್ವಚ್ಚತೆ, ಡ್ರೈನೇಜ್ ವ್ಯವಸ್ಥೆ, ಭದ್ರತೆಯನ್ನು ನೀಡಬೇಕು. ಪರ್ಸೀನ್ ಮೀನುಗಾರರಿಗೆ ಬಲೆ ಇಡಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಬಂದರಿನ ನಿರ್ವಾಹಣೆ ಯನ್ನು ಮೀನುಗಾರಿಕಾ ಸಂಘಟನೆಗಳಿಗೆ ನೀಡಬೇಕು, ಡಿಸೇಲ್ ಕೋಟವನ್ನು ದಿನವಾಹಿ 300ರಿಂದ 500ಲೀ ಗೆ ಏರಿಸುವುದು, ಮಾಸಿಕದಿಂದ ವಾರ್ಷಿಕ ಕೋಟದಡಿ ಸಿಗುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಅಧಿಕಾರಿಗಳು ಮಲ್ಪೆ ಬಂದರಿನಲ್ಲಿ ಕೆಲವೊಂದು ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕು. ಜು. 15ರೊಳಗೆ ಬೋಟ್ ಮಾಲಕರ ಡಿಸೇಲ್ ಪಾಸ್‌ಬುಕ್ ನವೀಕರಣವಾಗಿ ಮೀನುಗಾರರ ಕೈ ಸೇರುವ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಈ ಬಗ್ಗೆ ಸರಕಾರ ಮಟ್ಟದಲ್ಲಿ ಬೇಕಾದ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್., ಬಂದರು ಇಲಾಖೆಯ ಅಭಿಯಂತರ ಶ್ರೀನಿವಾಸ ಮೂರ್ತಿ, ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ನಾಗರಾಜ್ ಬಿ.ಕುಂದರ್, ಪರ್ಸೀನ್ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ವಿವಿಧ ಮೀನುಗಾರಿಕಾ ಸಂಘಟನೆಗಳ ಮುಖಂಡರಾದ ರಾಮಚಂದ್ರ ಕುಂದರ್, ಹರಿಶ್ಚಂದ್ರ ಕಾಂಚನ್, ಮೋಹನ್ ಕುಂದರ್, ದಯಾಕರ್ ವಿ. ಸುವರ್ಣ, ಜಗನ್ನಾಥ್ ಕಡೆಕಾರು, ದಯಾನಂದ ಕುಂದರ್, ನಾರಾಯಣ ಕರ್ಕೇರ, ಸತೀಶ್ ಕುಂದರ್, ಕಿಶೋರ್ ಪಡುಕರೆ, ಗೋವರ್ಧನ್, ಬೇಬಿ ಹೆಚ್. ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.