ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2025-02-03 23:25 IST
Photo of Protest
  • whatsapp icon

ಬೆಂಗಳೂರು : ಕೇಂದ್ರ ಸರಕಾರ 2025ರ ಬಜೆಟ್‍ನಲ್ಲಿ ದುರುದ್ದೇಶದಿಂದ ಕರ್ನಾಟಕಕ್ಕೆ ಸೂಕ್ತ ಅನುದಾನ ನೀಡದೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ, ಸೋಮವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕೇಂದ್ರ ಸರಕಾರ ದುರುದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ದಿಲ್ಲಿ ಹಾಗೂ ಬಿಹಾರಕ್ಕೆ ಹೆಚ್ಚು ಅನುದಾನ ಘೋಷಣೆ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜಕೀಯ ಸೇಡಿನಿಂದ ಕರ್ನಾಟಕದ ಅಭಿವೃದ್ಧಿಯನ್ನು ಸಹಿಸದೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕರ್ನಾಟಕದ ಜನತೆಗೆ ಹಾಗೂ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಭ್ರಷ್ಟರು ಬೇರೆ ರಾಜ್ಯಗಳಲ್ಲಿ ಚುನಾವಣೆ ಲಾಭಕ್ಕೋಸ್ಕರ ಕರ್ನಾಟಕದ ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳನ್ನೇ ಘೋಷಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ರಾಜಕೀಯ ಪ್ರಜ್ಞೆಯೇ ಇಲ್ಲ. ಇವರು ಹಣಕಾಸು ಸಚಿವರಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ ಕಿಂಚಿತ್ತು ಉಪಯೋಗವಿಲ್ಲದ ಈ ಬಜೆಟ್‍ನ್ನು ಈಗಾಗಲೇ ರಾಜ್ಯದ ಜನ ತಿರಸ್ಕರಿಸಿದ್ದಾರೆ. ರಾಜ್ಯದಿಂದ ಹೆಚ್ಚು ತೆರಿಗೆ ಹಾಗೂ ಜಿಎಸ್‍ಟಿ ಮೂಲಕ ಹಣ ಸಂಗ್ರಹಿಸಿ, ಕರ್ನಾಟಕ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಮಾತ್ರ ಶೂನ್ಯ. ಆದ್ದರಿಂದ ಇಂತಹ ಬೇಜವಾಬ್ದಾರಿ ಹಣಕಾಸು ಸಚಿವರು ಕರ್ನಾಟಕ ರಾಜ್ಯದಿಂದ ರಾಜ್ಯಸಭೆ ಸದಸ್ಯರಾಗಿ ಆ ಸ್ಥಾನಕ್ಕೆ ನ್ಯಾಯ ದೊರಕಿಸಿಕೊಡಲು ವಿಫಲವಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಜಿ.ಪ್ರಕಾಶ್ ಈ ಆನಂದ್, ಕಾಂಗ್ರೆಸ್ ಮುಖಂಡರಾದ ಕೆ.ಟಿ.ನವೀನ್, ಉಮೇಶ್, ಸುಂಕದಕಟ್ಟೆ ನವೀನ್, ಕುಶಾಲ್ ಹರವೇಗೌಡ, ಸಾಯಿ ನವೀನ್, ಹೇಮರಾಜ್, ರಂಜಿತ್ ಕುಮಾರ್ ರವಿ ಕುಮಾರ್, ಚಿನ್ನಿ ಪ್ರಕಾಶ್ ಓಬಳೇಶ್ ಮತ್ತಿತರರು ಹಾಜರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News