ವೈದ್ಯರ ಹುದ್ದೆ ಭರ್ತಿಗೆ ಕ್ರಮ : ದಿನೇಶ್ ಗುಂಡೂರಾವ್

Update: 2025-03-13 19:09 IST
ವೈದ್ಯರ ಹುದ್ದೆ ಭರ್ತಿಗೆ ಕ್ರಮ : ದಿನೇಶ್ ಗುಂಡೂರಾವ್
  • whatsapp icon

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಗುರುವಾರ ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯಲ್ಲಿ ಖಾಲಿ ಇರುವ 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಸದರಿ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿಯಡಿ ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಇಲಾಖೆಯಲ್ಲಿ ಕಾಲಕಾಲಕ್ಕೆ ಖಾಲಿಯಾಗುವ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ, ಮುಂಭಡ್ತಿ, ಗುತ್ತಿಗೆ ಆಧಾರದಡಿ, ವರ್ಗಾವಣೆ ಮೂಲಕ ಭರ್ತಿ ಮಾಡುವ ಮೂಲಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

2017-18 ಮತ್ತು 2019-20ನೆ ಸಾಲಿನಲ್ಲಿ ರಾಜ್ಯದಲ್ಲಿ 62 ಹೊಸ ತಾಲ್ಲೂಕುಗಳನ್ನು ರಚಿಸಲಾಗಿದ್ದು, ಇದರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕು ಒಳಗೊಂಡಿರುತ್ತದೆ. ಹೊಸದಾಗಿ ರಚಿಸಲಾದ 62 ತಾಲೂಕುಗಳಲ್ಲಿ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು ಆರ್ಥಿಕ ಇಲಾಖೆ ಸಹಮತಿ ಸ್ವೀಕೃತವಾದ ಕೂಡಲೇ ಇಳಕಲ್‍ನಲ್ಲಿ ಹೊಸ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಹುದ್ದೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News