ಕರಾವಳಿ ಭಾಗದಲ್ಲಿ ಡಂಪಿಂಗ್ ಯಾರ್ಡ್ ಸಮಸ್ಯೆಗೆ ಪರಿಹಾರ: ಸಚಿವ ಭೈರತಿ ಸುರೇಶ್

ಬೆಂಗಳೂರು : ‘ಕರಾವಳಿ ಭಾಗವು ಸೇರಿದಂತೆ ರಾಜ್ಯದ ಹಲವು ಕಡೆ ಕಸ ವಿಲೇವಾರಿ ಮಾಡಲು ಡಂಪಿಂಗ್ ಯಾರ್ಡ್ ಸಮಸ್ಯೆ ಇದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಂಪಿಂಗ್ ಯಾರ್ಡ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸಕಲೇಶಪುರ, ಉಳ್ಳಾಲ, ಸುಳ್ಯ ವಿಧಾನಸಭೆ ಕ್ಷೇತ್ರಗಳಲ್ಲಿರುವ ಕಸ ವಿಲೇವಾರಿ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದ ಘನ ತ್ಯಾಜ್ಯ ಘಟಕದಲ್ಲಿ ಯಾವುದೇ ಕುಸಿತ ಆಗಿಲ್ಲ. 2019ರ ಆ.6ರಂದು ಬಾರೀ ಮಳೆಯಿಂದಾಗಿ ಈ ಘಟಕ ಹಾನಿಗೊಳಗಾಗಿತ್ತು. ಜಮೀನುಗಳಿಗೆ, ಆಸ್ತಿ, ಪಾಸ್ತಿಗಳಿಗೆ ಹಾನಿ ಉಂಟಾಗಿತ್ತು. ಒಟ್ಟು 14,19,88,398 ರೂ. ಪರಿಹಾರ ನೀಡಲಾಗಿದೆ. ಅಲ್ಲದೇ ಕೃಷಿ ಜಮೀನಿನ ಬೆಳೆ ಮತ್ತು ಮರಗಳಿಗೆ 5,97,14,713 ರೂ.ಗಳ ಪರಿಹಾರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.