ಮಂಗಳೂರು ಪೊಲೀಸರ ಡ್ರಗ್ಸ್ ಕಾರ್ಯಾಚರಣೆ: ವಿಧಾನಸಭೆಯಲ್ಲಿ ಅಭಿನಂದನೆ

Update: 2025-03-17 21:18 IST
ಮಂಗಳೂರು ಪೊಲೀಸರ ಡ್ರಗ್ಸ್ ಕಾರ್ಯಾಚರಣೆ: ವಿಧಾನಸಭೆಯಲ್ಲಿ ಅಭಿನಂದನೆ
  • whatsapp icon

ಬೆಂಗಳೂರು : ಬರೋಬ್ಬರಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವ ಮಂಗಳೂರು ಪೊಲೀಸರು ಕಾರ್ಯಾಚರಣೆಗೆ ವಿಧಾನಸಭೆಯ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಅಭಿನಂದಿಸಿದರು.

ಸೋಮವಾರ ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಸ್ತಾಪಿಸಿ, ಮಂಗಳೂರು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 75ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶ ಮಾಡಿಕೊಂಡಿದ್ದಾರೆ. ಇದು ಅಭಿನಂದನಾರ್ಹ ಕಾರ್ಯಾಚರಣೆ ಎಂದು ಹೇಳಿದರು.

ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಪೊಲೀಸರು ಅಭಿನಂದನಾರ್ಹರು, ಗೃಹ ಸಚಿವರು ಪೊಲೀಸರಿಗೆ ಮತ್ತಷ್ಟು ಬೆಂಬಲ ನೀಡಿ, ಮಾದಕ ವಸ್ತುಗಳ ವಿರುದ್ಧದ ಕಾರ್ಯಚರಣೆಯನ್ನು ವ್ಯಾಪಕಗೊಳಿಸಲಿ ಎಂದು ಸಲಹೆ ನೀಡಿದರು.

ಚೆನ್ನರಾಯಪಟ್ಟಣ ಕ್ಷೇತ್ರ ಜೆಡಿಎಸ್‍ನ ಸಿ.ಎನ್.ಬಾಲಾಕೃಷ್ಣ, ಮಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಗೃಹ ಸಚಿವರು,ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕೆ ಇಬ್ಬರನ್ನು ಅಭಿನಂಧಿಸುವುದಾಗಿ ಹೇಳಿದರು.

ಹೊನ್ನಾಳ್ಳಿ ಕ್ಷೇತ್ರದ ಕಾಂಗ್ರೆಸ್‍ನ ಡಿ.ಜಿ.ಶಾಂತನಗೌಡ, ಎರಡು ತಿಂಗಳ ಹಿಂದೆ ತಮ ನ್ಯಾಮತಿ ಕ್ಷೇತ್ರದ ಬ್ಯಾಂಕ್ ಒಂದರಲ್ಲಿ 28 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ದರೋಡೆಯಾಗಿತ್ತು. ಪೊಲೀಸರು ಮೊನ್ನೆ ಆರೋಪಿಗಳನ್ನು ಬಂಧಿಸಿದ್ದರು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಗುಂಡು ಹೊಡೆಯಲಾಗಿದೆ. ಪೊಲೀಸರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಶಿಕಾರಿಪುರದ ಬಿಜೆಪಿಯ ಬಿ.ವೈ.ವಿಜಯೇಂದ್ರ, ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಭಿನಂದನಾರ್ಹರು. ಡ್ರಗ್ಸ್ ಜಾಲ ತಾಲೂಕು ಮಟ್ಟಕ್ಕೆ ಹಬ್ಬಿದೆ. ಜಪ್ತಿ ಮಾಡಲಾದ ಮಾದಕ ವಸ್ತುಗಳು ಪೊಲೀಸರ ಮೂಲಕವೇ ಮಾರಾಟವಾಗುತ್ತಿದೆ ಎಂಬ ಆರೋಪಗಳಿವೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತು ಯಾವ ರೀತಿ ವಿಲೇವಾರಿಯಾಗುತ್ತಿದೆ ಎಂಬುದನ್ನು ಸಚಿವರು ಗಮನಿಸಬೇಕು ಎಂದು ಸಲಹೆ ನೀಡಿದರು.

ದಾಸರಹಳ್ಳಿ ಬಿಜೆಪಿಯ ಮುನಿರಾಜು, ಬೆಂಗಳೂರಿನಲ್ಲಿ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಹಿವಾಟು ನಡೆಸಲು ವಿದೇಶಿ ವ್ಯಕ್ತಿಗಳ ಕೈವಾಡದಿಂದ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ದೂರಿದರು. ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್, ಈ ವಿಚಾರ ಹೆಚ್ಚು ಚರ್ಚೆ ಬೇಡ, ಮಂಗಳೂರು ಪೆÇಲೀಸರು ತಳಮಟ್ಟದಿಂದ ಶುರು ಮಾಡಿ 15 ಗ್ರಾಂನಿಂದ ಆರಂಭಾಗಿ 6.5 ಕೆಜಿವರೆಗೂ ವಶ ಪಡಿಸಿಕೊಂಡಿದ್ದಾರೆ. ಈ ಕಳ್ಳ ಸಾಗಾಣಿಕೆ ವಿಮಾನ ನಿಲ್ದಾಣದಲ್ಲಿ ಒಳ ಸಂಚು ನಡೆಯುತ್ತಿರುವ ಅನುಮಾನಗಳಿವೆ ಎಂದು ಹೇಳಿದರು.

ರುದ್ರಪ್ಪ ಲಮಾಣಿ ಬೆನ್ನು ಮೊಳೆಗೆ ಪೆಟ್ಟು: ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಧಿವೇಶನದ ಕಲಾಪ ಮುಗಿಸಿ ತಮ್ಮ ಊರಿಗೆ ಪ್ರಯಾಣಿಸುವಾಗ ಹಿರಿಯೂರು ಬಳಿ ಅಪಘಾತವಾಗಿ ತಲೆ ಮತ್ತು ಬೆನ್ನು ಮೂಳೆಗೆ ಪೆಟ್ಟಾಗಿದೆ. ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ತಾವು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಕೊಂಡು ಬಂದಿದ್ದೇನೆ. ಈಗ ಸುಧಾರಿಸಿದ್ದಾರೆ. ಸಂಪೂರ್ಣ ವಿಶ್ರಾಂತಿಯ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಯು.ಟಿ.ಖಾದರ್ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News