ಮಂಡ್ಯದ ಕೆಎಚ್‍ಬಿ ಬಡಾವಣೆಯಲ್ಲಿ ಹೊಸದಾಗಿ ವಿತರಣಾ ಮಾರ್ಗ ಅಳವಡಿಸಲು ಕ್ರಮ : ಭೈರತಿ ಸುರೇಶ್

Update: 2025-03-19 00:20 IST
ಮಂಡ್ಯದ ಕೆಎಚ್‍ಬಿ ಬಡಾವಣೆಯಲ್ಲಿ ಹೊಸದಾಗಿ ವಿತರಣಾ ಮಾರ್ಗ ಅಳವಡಿಸಲು ಕ್ರಮ : ಭೈರತಿ ಸುರೇಶ್
  • whatsapp icon

ಬೆಂಗಳೂರು: ಮಂಡ್ಯದ ಕೆಎಚ್‍ಬಿ ಬಡಾವಣೆಯಲ್ಲಿ ಹೊಸದಾಗಿ ಕೊಳವೆ ವಿತರಣಾ ಮಾರ್ಗಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆ.ಎಚ್.ಬಿ. ಬಡಾವಣೆಯಲ್ಲಿ ಹಾಲಿ ಇರುವ ಓ.ಎಚ್.ಟಿ.ಯನ್ನು ಪುನರುಜ್ಜೀವನಗೊಳಿಸಿ ಕಾವೇರಿ ನೀರನ್ನು ಪೂರೈಸಲು ಅಗತ್ಯ ಇರುವ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ 350 ಕೋಟಿ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಮಂಡ್ಯ ನಗರ ಸಭೆಯ ಪೌರಾಯುಕ್ತರಿಗೆ ಕಳುಹಿಸಿಕೊಡಲಾಗಿದೆ ಎಂದರು.

ಕರ್ನಾಟಕ ಗೃಹ ಮಂಡಳಿ ವತಿಯಿಂದ ಚಿಕ್ಕ ಮಂಡ್ಯ ಸಮೀಪದ ಕೆ.ಎಚ್.ಬಿ. ಬಡಾವಣೆಯಲ್ಲಿ ಕೊಳವೆ ಬಾವಿಯಿಂದ ನೀರು ಸರಬರಾಜು ವ್ಯವಸ್ಥೆಯನ್ನು 2002-03ರಲ್ಲಿ ಕಲ್ಪಿಸಿದ್ದು ಗೃಹ ಮಂಡಳಿಯಿಂದ 2019ರಲ್ಲಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಗೃಹ ಮಂಡಳಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಈ ಬಡಾವಣೆಗೆ ಕಾವೇರಿ ನೀರು ಪೂರೈಸಿರುವುದಿಲ್ಲ ಎಂದು ಭೈರತಿ ಸುರೇಶ್ ಹೇಳಿದರು.

ಬಡಾವಣೆಗೆ ಗೃಹ ಮಂಡಳಿ ವತಿಯಿಂದ ನಗರಸಭೆಗೆ 550 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿದೆ. ಈ ಅನುದಾನದಲ್ಲಿ ಬಡಾವಣೆಗೆ ಸಂಪರ್ಕ ಕಲ್ಪಿಸಲು ಮುಖ್ಯ ರಸ್ತೆಗಳನ್ನು ಅಭಿವೃದ್ದಿಪಡಿಸಲು 446 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಭೈರತಿ ಸುರೇಶ್ ತಿಳಿಸಿದರು.

ಬಡಾವಣೆಯ ನಿರ್ಮಾಣ ವೇಳೆಯಲ್ಲಿ ಗೃಹ ಮಂಡಳಿಯು ಅಳವಡಿಸಿರುವ ನೀರು ಸರಬರಾಜು ಮಾರ್ಗಗಳು ಹಲವು ವರ್ಷ ಬಡಾವಣೆಯಲ್ಲಿ ಯಾವುದೇ ಮನೆ ನಿರ್ಮಾಣ ಆಗದ ಕಾರಣ ಬಳಕೆಯಾಗದೇ ಕೆಲವೆಡೆ ದುರಸ್ತಿಯಲ್ಲಿರುವುದರಿಂದ ಉಳಿಕೆಯಾದ 103.65 ಲಕ್ಷ ರೂ.ಗಳನ್ನು ಬಡಾವಣೆಯಲ್ಲಿನ ನೀರು ಸರಬರಾಜು ವ್ಯವಸ್ಥೆ ಮತ್ತು ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅದ್ಯತೆಗನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭೈರತಿ ಸುರೇಶ್ ತಿಳಿಸಿದರು.

ಈ ಬಡಾವಣೆಗೆ ಕಾವೇರಿ ಸಗಟು ನೀರು ಸರಬರಾಜು ಮಾಡಲು 2012ನೇ ಸಾಲಿನಲ್ಲಿ ವಂತಿಕೆ ಮೊತ್ತ 93.59 ಲಕ್ಷ ರೂ.ಗಳನ್ನು ಗೃಹ ಮಂಡಳಿ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಭರಿಸಲಾಗಿರುತ್ತದೆ. ಹಾಲಿ ಇರುವ ಮೇಲ್ಮಟ್ಟ ಜಲ ಸಂಗ್ರಹಗಾರವನ್ನು ಹೊಳಲು ಸರ್ಕಲ್‍ನಿಂದ ಕೆ.ಎಚ್.ಬಿ ಬಡಾವಣೆವರೆಗೂ ಅಳವಡಿಸಲಾಗಿದ್ದು, 200 ಮಿ.ಮೀ. ವ್ಯಾಸದ ಫೀಡರ್ ಕೊಳವೆ ಮಾರ್ಗವನ್ನು ಹಾಗೂ ಪಂಪುರೇಚಕಗಳನ್ನು ದುರಸ್ತಿಪಡಿಸಲು 16.35 ಲಕ್ಷ ರೂ.ಗಳನ್ನು ಗೃಹ ಮಂಡಳಿ ವತಿಯಿಂದ ದುರಸ್ತಿ ಕಾಮಗಾರಿಯನ್ನು ಕೈಗೊಂಡು ಕಾವೇರಿ ಕುಡಿಯುವ ನೀರನ್ನು ಮೇಲ್ಮಟ್ಟ ಜಲಸಂಗ್ರಹಗಾರಕ್ಕೆ ತುಂಬಿಸಿ ಚಾಲನೆಗೊಳಿಸಿ ಗೃಹ ಮಂಡಳಿಗೆ ಹಸ್ತಾಂತರಿಸಲಾಗಿರುತ್ತದೆ ಎಂದು ಭೈರತಿ ಸುರೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News