ಕೆಐಎಡಿಬಿ ವತಿಯಿಂದ ಜಮೀನು ಖರೀದಿ ನಿಲ್ಲಿಸುವಂತೆ ಬಿ.ಆರ್.ಪಾಟೀಲ್ ಆಗ್ರಹ

ಬಿ.ಆರ್.ಪಾಟೀಲ್
ಬೆಂಗಳೂರು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ವತಿಯಿಂದ ಜಮೀನು ಖರೀದಿ ಮಾಡುವ ಪ್ರಕ್ರಿಯೆಯನ್ನು ಮೊದಲು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಆರ್.ಪಾಟೀಲ್ ಆಗ್ರಹಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೆಐಎಡಿಬಿಯವರು ಜಮೀನುಗಳನ್ನು ಖರೀದಿ ಮಾಡುತ್ತಾರೆ. ಆದರೆ, ಉದ್ದಿಮೆಗಳನ್ನು ಸ್ಥಾಪನೆ ಮಾಡುವುದಿಲ್ಲ. ಜಮೀನು ಇದ್ದರೂ ಉದ್ಯೋಗಾವಕಾಶಗಳು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕೆಐಎಡಿಬಿ ವತಿಯಿಂದ ಜಮೀನು ಖರೀದಿ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಈಗಾಗಲೆ ಖರೀದಿ ಮಾಡಿರುವ ಜಾಗದಲ್ಲಿ ಉದ್ದಿಮೆಗಳನ್ನು ಪ್ರಾರಂಭ ಮಾಡಲಿ. ಕಲಬುರಗಿ ಬಳಿ ಫಲವತ್ತಾದ 1500 ಎಕರೆ ಜಮೀನನ್ನು ಥರ್ಮಲ್ ಪ್ಲಾಂಟ್ ಮಾಡಲು ಸ್ವಾಧೀನಪಡಿಸಿಕೊಂಡರು. 15 ವರ್ಷವಾದರೂ ಈ ಜಾಗದಲ್ಲಿ ಒಂದೇ ಒಂದು ಉದ್ದಿಮೆ ಬಂದಿಲ್ಲ ಎಂದು ಅವರು ಹೇಳಿದರು.
ಈಗ ಸರಕಾರ ಅಲ್ಲಿ ಸೋಲಾರ್ ಪಾರ್ಕ್, ಜವಳಿ ಪಾರ್ಕ್ ಮಾಡಲು ಹೊರಟಿದೆ. ಸೋಲಾರ್ ಪಾರ್ಕ್ ಮಾಡಲು ಒಣ ಭೂಮಿ ಸಾಕಷ್ಟಿದೆ. ನನ್ನ ಕ್ಷೇತ್ರದಲ್ಲೆ 400 ರಿಂದ 500 ಎಕರೆ ಇದೆ. ಆದರೆ, ಫಲವತ್ತಾದ ಭೂಮಿ ಮೇಲೆ ಯಾಕೆ ಸೋಲಾರ್ ಪಾರ್ಕ್ ನಿರ್ಮಾಣ ಮಾಡುತ್ತಾರೆ. ಫಲವತ್ತಾದ ಭೂಮಿಯಲ್ಲಿ ಬೇಕಾದರೆ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಮಾಡಲಿ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಸಿಗುತ್ತದೆ. ಆದರೆ, ಆ ಭೂಮಿಯಲ್ಲಿ ಕೂಲಿ ಮಾಡುವಂತಹ ದುಡಿಯುವ ವರ್ಗದ ಗತಿ ಏನು? ದಿನಗೂಲಿ ನೌಕರರು ತಮ್ಮನ್ನು ಯಾರಾದರೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರಾ ಎಂದು ರೈಲ್ವೆ ನಿಲ್ದಾಣಗಳ ಬಳಿ ಕಾಯುತ್ತಾ ಕುಳಿತಿರುತ್ತಾರೆ. ನರೇಗಾ ಯೋಜನೆಯೂ ಪಟ್ಟಣ ಪ್ರದೇಶಗಳಿಗೂ ಬರಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿಯೊಂದಿಗೆ ಪುನಃ ಜಾರಿಗೆ ತರುತ್ತೇವೆ ಎಂದು ರಾಜ್ಯದ ಜನತೆಗೆ ಮಾತು ಕೊಟ್ಟಿದ್ದೇವೆ. ಎರಡು ವರ್ಷ ಆಗಿದೆ ಸರಕಾರ ಅಧಿಕಾರಕ್ಕೆ ಬಂದು. ಜನರಿಗೆ ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳಬೇಕು. ಕೃಷಿ ಕ್ಷೇತ್ರವು ಹೆಚ್ಚಿನ ಉದ್ಯೋಗ ಕೊಡುವ ಕ್ಷೇತ್ರ. ಆದುದರಿಂದ, ಕೃಷಿ ಕಡೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.
ಸ್ಮಾರ್ಟ್ ಸಿಟಿಗಳನ್ನು ಮಾಡುತ್ತಿದ್ದೇವೆ. ಆದರೆ, ಹಳ್ಳಿಗಳ ಕಡೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ, ರೈತರು ತಮ್ಮ ಹೊಲಗಳನ್ನು ಮಾರಾಟ ಮಾರಿ, ವಲಸೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರು, ಮುಂಬೈ ಕಡೆಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದಾರೆ. ಆದುದರಿಂದ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ನೆರವು ನೀಡಬೇಕಿದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದಾಗ, ರೈತರನ್ನು ರಕ್ಷಿಸಲು ಸರಕಾರ ಮಧ್ಯಪ್ರವೇಶ ಮಾಡಬೇಕು. ಅದಕ್ಕಾಗಿ, ಸುಮಾರು 10 ಸಾವಿರ ಕೋಟಿ ರೂ.ಗಳ ಆವರ್ತ ನಿಧಿ ಇಡಬೇಕು. ಅದೇ ರೀತಿ ತೊಗರಿ ಮಂಡಳಿಯನ್ನು ಅಭಿವೃದ್ಧಿಪಡಿಸಬೇಕು. ದೇಶದ ಯಾವುದೆ ರಾಜ್ಯದಲ್ಲಿ ಸಾರಾಯಿ ನಿಷೇಧ ಯಶಸ್ವಿಯಾಗಿಲ್ಲ. ಧರ್ಮ, ಚಾರಿತ್ರ್ಯದ ಬಗ್ಗೆ ಮಾತನಾಡುವ ಬಿಜೆಪಿಯವರು ಇಡೀ ದೇಶದಲ್ಲಿ ಮದ್ಯಪಾನ ನಿಷೇಧ ಮಾಡಲಿ ಎಂದು ಅವರು ಆಗ್ರಹಿಸಿದರು.
ಜಾತಿ ಪದ್ಧತಿ, ನಿರುದ್ಯೋಗ, ಬಡತನ, ನೀರಾವರಿಗಾಗಿ ಬಿಜೆಪಿಯವರು ಎಂದಾದರೂ ಹೋರಾಟ ಮಾಡಿದ್ದಾರಾ? ಮಾತೆತ್ತಿದ್ದರೆ ಕೇವಲ ಧರ್ಮ, ಜಾತಿ, ಕುಲ ಎಂದು ಸಮಾಜವನ್ನು ಒಡೆದು ನುಚ್ಚು ನೂರು ಮಾಡಿ, ದೇಶದ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.