ನದಿಯಲ್ಲಿ ಸ್ನಾನ ಮಾಡದಿದ್ದರೆ ಪಾಪಿಗಳೇ? : ಸುಬ್ಬು ಹೊಲೆಯಾರ್‌

Update: 2025-03-21 00:27 IST
ನದಿಯಲ್ಲಿ ಸ್ನಾನ ಮಾಡದಿದ್ದರೆ ಪಾಪಿಗಳೇ? : ಸುಬ್ಬು ಹೊಲೆಯಾರ್‌
  • whatsapp icon

ಬೆಂಗಳೂರು : ‘ಒಂದು ಕಾಲದಲ್ಲಿ ನಮ್ಮನ್ನು ನೀರು ಮುಟ್ಟಬೇಡಿ ಎಂದು ಹೇಳುತ್ತಿದ್ದರು. ಆದರೆ ಇದೀಗ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎಂದು ನಂಬಿಸುತ್ತಿದ್ದಾರೆ. ಹಾಗಾದರೆ ನದಿಯಲ್ಲಿ ಸ್ನಾನ ಮಾಡಿದವರು ಮಾತ್ರ ಪುಣ್ಯವಂತರು, ಇಲ್ಲದಿದ್ದರೆ ಪಾಪಿಗಳೇ? ಎಂದು ಹಿರಿಯ ಕವಿ ಸುಬ್ಬು ಹೊಲೆಯಾರ್ ಪ್ರಶ್ನಿಸಿದ್ದಾರೆ.

ಗುರುವಾರ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ‘ಭಾರತದ ಅಸ್ಪಷ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ ನೆನಪಿನಲ್ಲಿ’ ಹಮ್ಮಿಕೊಂಡಿದ್ದ ‘ಶೋಷಿತರ ಸಂಘರ್ಷ ದಿನಾಚರಣೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಾರ್ತಾಭಾರತಿ’ಯ ಸಂಪಾದಕೀಯ ಲೇಖನವೊಂದರಲ್ಲಿ ರಾಜ್ಯದ ಶೇ.56ರಷ್ಟು ಜನರು ಅಸ್ಪಷ್ಯತೆಯನ್ನು ಆಚರಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಸವರ್ಣೀಯರು ಚೌಡಾರ್ ಕೆರೆ ನೀರನ್ನು ಕುಡಿಯಲು ವಿರೋಧಿಸಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಕೊಳೆತ ಮೆದುಳುಗಳಲ್ಲಿ ಅಸ್ಪಷ್ಯತೆ ಇಂದಿಗೂ ಜೀವಂತವಾಗಿದೆ. ಪ್ರತೀ ಊರಿನಲ್ಲಿಯೂ ಮಹಾಡ್ ಘಟನೆ ಇದೆ. ಇದನ್ನು ಉಳಿದ ಸಮುದಾಯಗಳು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಅವರು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಭಾರತದಲ್ಲಿ ನಡೆದಂತಹ ಅಸ್ಪಷ್ಯರ ಪರವಾದ ಮೊಟ್ಟ ಮೊದಲ ಚಳವಳಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಇದಾಗಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೈ ಭೀಮ ಪುಸ್ತಕ ಬಿಡುಗಡೆಗೊಳಿಸಲಾಯಿತು. ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್‌ವಾದ) ಸಂಚಾಲಕ ಮಾವಳ್ಳಿ ಶಂಕರ್, ದಸಂಸದ ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ, ಬೌದ್ಧ ಉಪಾಸಕ ಬಿ.ಪಿ.ತಿಪ್ಪೇಸ್ವಾಮಿ, ಶ್ರೀಪಾದ್ ಭಟ್, ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News