ಶಾಸನಸಭೆಯಿಂದ ಮುನಿರತ್ನ ದೂರವಿರಿಸಿ: ಸಂತ್ರಸ್ತೆ ಆಗ್ರಹ

ಮುನಿರತ್ನ
ಬೆಂಗಳೂರು : ‘ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನ ಅವರನ್ನು ಶಾಸನಸಭೆಯಿಂದ ದೂರವಿರಿಸಬೇಕು’ ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ, ‘ಮುನಿರತ್ನ ಮೇಲೆ ರಾಮನಗರದಲ್ಲಿ ದೂರು ನೀಡಲಾಗಿತ್ತು. ಪೊಲೀಸ್ ಆಯುಕ್ತರಿಗೂ ಮಾಹಿತಿ ಒದಗಿಸಿದ್ದೆ. ಬಳಿಕ ಮುನಿರತ್ನ ನನಗೆ ದೂರವಾಣಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಹೆಣ್ಣು ಮಕ್ಕಳನ್ನು ಅವರು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.
ಭ್ರಷ್ಟ ಶಾಸಕ ಮುನಿರತ್ನ 15 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕಗೆ ಮುನಿರತ್ನ ನಡೆಸಿರುವ ದುಷ್ಕೃತ್ಯಗಳ ಬಗ್ಗೆ ಅರಿವಿಲ್ಲವೇ?, ಇವರು ಇಬ್ಬರು ಪ್ರಭಾವಿ ನಾಯಕರನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಆ ವೀಡಿಯೋಗಳನ್ನು ಮಾಡಿ ನನಗೆ ತೋರಿಸಿದ್ದರು. ಅವರ ಸ್ಟುಡಿಯೋ ಅಶೋಕ್ ಮನೆ ಬಳಿ ಇದೆ ಎಂದು ಅವರು ಆರೋಪಿಸಿದರು.
ಹನಿಟ್ರ್ಯಾಪ್ ಪಿತಾಮಹ ಮುನಿರತ್ನ ವಿರುದ್ಧ ಗೃಹ ಸಚಿವರಿಗೆ ದೂರು ನೀಡಲಾಗುವುದು. ಈ ಹನಿಟ್ರ್ಯಾಪ್ ವೀಡಿಯೊಗಳನ್ನು ರಚಿಸಲಾದ ಸ್ಟುಡಿಯೋವನ್ನು ಪರಿಶೀಲಿಸಬೇಕು ಮತ್ತು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದರು.
ಲಗ್ಗೆರೆ ನಾರಾಯಣಸ್ವಾಮಿ ಮಾತನಾಡಿ, ‘ಮುನಿರತ್ನ, ಶಾಸಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಯುವತಿಯೊಬ್ಬಳನ್ನು ನಿಂದಿಸಿದ್ದಾರೆ ಮತ್ತು ಅವರ ವಿರುದ್ಧ ನೂರಾರು ಪ್ರಕರಣಗಳಿವೆ. ಮುನಿರತ್ನಗೆ ಕಾನೂನು ಅನ್ವಯಿಸುತ್ತದೆಯೇ ಅಥವಾ ಇಲ್ಲವೇ? ಮುನಿರತ್ನರಿಂದ ನಮಗೆ ಜೀವ ಭಯವಿದೆ. ಆದರೆ ಅವರಿಗೆ ಎಲ್ಲ ರೀತಿಯ ಭದ್ರತೆಯನ್ನು ನೀಡಲಾಗಿದೆ. ನಮಗೆ ಮಾತ್ರ ರಕ್ಷಣೆ ಇಲ್ಲ ಎಂದರು.
ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯಕರ್ ಉಪಸ್ಥಿತರಿದ್ದರು.