‘ಸಂವಿಧಾನ ಬದಲಾವಣೆ’ ಡಿಕೆಶಿ ಹೇಳಿಕೆ ದುರಾದೃಷ್ಟಕರ: ವಿ.ಸುನಿಲ್ ಕುಮಾರ್

ವಿ.ಸುನಿಲ್ ಕುಮಾರ್
ಬೆಂಗಳೂರು : ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಮುಸ್ಲಿಂ ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ‘ಸಂವಿಧಾನವನ್ನೇ ಬದಲಾಯಿಸುತ್ತೇವೆ’ ಎಂದು ಮಾತನಾಡಿರುವುದು ದುರಾದೃಷ್ಟಕರ ಎಂದು ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನವನ್ನೇ ಅಮಾನತಿನಲ್ಲಿಟ್ಟು ತುರ್ತು ಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ? ಸಂವಿಧಾನವನ್ನು ಬದಲಾಯಿಸಲು ಹೊರಟರೆ ರಕ್ತಪಾತವಾಗುತ್ತದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಶಾಶ್ವತ ಅನ್ಯಾಯ ಮಾಡುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದುಳಿದ ವರ್ಗಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಮೀಸಲನ್ನು ಮುಸ್ಲಿಮರಿಗೆ ವರ್ಗಾಯಿಸುತ್ತಿರುವ ನಿಮ್ಮ ಮತ ಬ್ಯಾಂಕ್ ರಾಜಕಾರಣದ ವಿರುದ್ಧ ಬಿಜೆಪಿ ಹೋರಾಟ ರೂಪಿಸುತ್ತದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಎಂದರೆ ಓಬಿಸಿ-ದಲಿತ ವಿರೋಧಿ, ಕಾಂಗ್ರೆಸ್ ಹಿಂದು ವಿರೋಧಿ, ಕಾಂಗ್ರೆಸ್ ಎಂದರೆ ಸಂವಿಧಾನ ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವಯೋಜಿತ: ಅದೇ ರೀತಿ ಸ್ಪೀಕರ್ ಯು.ಟಿ.ಖಾದರ್ ಅವರು ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವುದು ಪೂರ್ವಯೋಜಿತ ಎಂಬ ಅನುಮಾನ ಬರುತ್ತಿದೆ. ಏಕೆಂದರೆ ಅಧಿವೇಶನ ಪ್ರಾರಂಭವಾದ ನಂತರದ ವಾರದಲ್ಲಿ ಅವರು ಬಿಜೆಪಿ ಶಾಸಕರಿಗೆ ಎತ್ತಿ ಬಿಸಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ತಕ್ಷಣ ಈ ಅಮಾನತು ಆದೇಶವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.