ಚಿಕ್ಕಮಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿದ್ದಲ್ಲೇ ಸಿಎಂ ಹಾಗೂ ಡಿಸಿಎಂ ಭಾವಚಿತ್ರಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಆಝಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಮುಂದಾದರು. ಅಲ್ಲದೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ ನಾಮಫಲಕಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಮುಖಂಡರಾದ ಪುಷ್ಪರಾಜ್, ಕೋಟೆ ರಂಗನಾಥ್, ಜಸಿಂತಾ ಅನಿಲ್‌ಕುಮಾರ್, ರವೀಂದ್ರ ಬೆಳವಾಡಿ, ಸೋಮಶೇಖರ್, ವಿಜಯಕುಮಾರ್, ರಾಜಪ್ಪ, ಸೀತಾರಾಮ್ ಭರಣ್ಯ, ಸುಜಾತಾ ಶಿವಕುಮಾರ್, ಈಶ್ವರಹಳ್ಳಿ ಮಹೇಶ್, ಸಂತೋಷ್ ಕೋಟ್ಯಾನ್ ಹಾಗೂ ಮತ್ತಿತರರು ಭಾಗವಹಿಸಿದ್ದರು.