ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿ ಸಲ್ಲಿಸಬೇಕು : ಹೈಕೋರ್ಟ್

ಹೈಕೋರ್ಟ್
ಬೆಂಗಳೂರು : ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಸಿವಿಲ್ ನ್ಯಾಯಾಲಯ, ಅರೆ ನ್ಯಾಯಾಧೀಕರಣ, ಆಡಳಿತಾತ್ಮಕ ಪ್ರಾಧಿಕಾರಗಳಲ್ಲಿ ಬಾಕಿಯಿರುವ ಪ್ರಕರಣಗಳು, ಜಾತಿ ಮತ್ತು ಶಿಕ್ಷಣ ಸೇರಿದಂತೆ ಎಲ್ಲ ಮಾಹಿತಿ ಇರುವ ಪ್ರಮಾಣ ಪತ್ರ ಸಲ್ಲಿಸಿ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಾತಿ ಪ್ರಮಾಣ ಪತ್ರ ವಿಚಾರವಾಗಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರ ಏಕಸದಸ್ಯ ಪೀಠ ಮೇಲಿನ ಅಭಿಪ್ರಾಯ ಹೇಳಿದೆ.
ಓರ್ವ ವ್ಯಕ್ತಿ ಒಂದು ರಾಜ್ಯದಲ್ಲಿ ಜನಿಸಿ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಿ ನೆಲೆಸಿ ಆ ರಾಜ್ಯದಲ್ಲಿ ಅವರ ಜಾತಿಯ ಕುರಿತ ಅಧಿಸೂಚನೆ ಹೊರಡಿಸಿರುವುದು ಅನ್ವಯವಾಗುವುದಿಲ್ಲ ಎಂಬುದರ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ನ್ಯಾಯಪೀಠ ಉಲ್ಲೇಖಿಸಿದೆ.
ಅರ್ಜಿದಾರ ಚವ್ಹಾಣ್ ಅವರು ಕರ್ನಾಟಕದಲ್ಲಿ ಜನಿಸಿರುವುದಾಗಿ ತಿಳಿಸಿದ್ದಾರೆ. ಈ ಅಂಶವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ನಿರ್ಧರಿಸಬೇಕು. ಈ ವಿವಾದವನ್ನು ನ್ಯಾಯಾಲಯಗಳು ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಜಾತಿ ಮತ್ತು ಶಿಕ್ಷಣ ಪ್ರಮಾಣ ಪತ್ರಗಳ ಕುರಿತಂತೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು ಆಯೋಗ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ.