‘ಸುಸ್ಥಿರ ನಗರ ನೀರು ನಿರ್ವಹಣೆಯಲ್ಲಿ ಅತ್ಯುತ್ತಮ ಯೋಜನೆಗಳ ಅನುಷ್ಠಾನʼ; ಜಲಮಂಡಳಿಗೆ ಯುನೆಸ್ಕೋ ಸಹಭಾಗಿತ್ವದ ಪ್ರತಿಷ್ಠಿತ ವರ್ಲ್ಡ್ ವಾಟರ್ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರ ನೀರು ಸರಬರಾಜು ಹಾಗೂ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವಂತಹ ಅತ್ಯುತ್ತಮ ಸುಸ್ಥಿರ ಯೋಜನೆಗಳ ಅನುಷ್ಠಾನಕ್ಕೆ, ಯುನೆಸ್ಕೋ ಸಹಭಾಗಿತ್ವದ ಪ್ರತಿಷ್ಠಿತ ‘ವರ್ಲ್ಡ್ ವಾಟರ್ 2025 ಪ್ರಶಸ್ತಿ’ಗೆ ಭಾಜನವಾಗಿದೆ.
ನೀರಿನ ಸಂಸ್ಕರಣೆ, ಮರುಬಳಕೆ ಮತ್ತು ಸಂರಕ್ಷಣೆಗಾಗಿ ವಿವಿಧ ಕಂಪನಿಗಳು, ಸರಕಾರೇತರ ಸಂಸ್ಥೆಗಳ ಅಥವಾ ವ್ಯಕ್ತಿಗಳು ಕೈಗೊಂಡ ವಿಶಿಷ್ಟ ಕಾರ್ಯಗಳನ್ನು ಗೌರವಿಸಲು ಯುನೆಸ್ಕೋ ಸಹಯೋಗದಲ್ಲಿ ‘ವಾಟರ್ ಡೈಜೆಸ್ಟ್ ವಾಟರ್ ಅವಾರ್ಡ್’ ನೀಡಿ ಗೌರವಿಸಲಾಗುತ್ತದೆ. ಮಾ.31ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಗೆ ಕಾರಣ: ಬಿರು ಬೇಸಿಗೆಯಲ್ಲಿ ನಗರದ ಜನತೆಗೆ ನೀರಿನ ಕೊರತೆ ಆಗದಂತೆ ಕ್ರಮ, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇ.28 ರಿಂದ 20ಕ್ಕೆ ಇಳಿಸಿರುವುದು, ಗ್ರೀನ್ ಸ್ಟಾರ್ ಛಾಲೆಂಜ್ ಮೂಲಕ ನೀರು ಉಳಿತಾಯ ಹಾಗೂ ಸಮರ್ಪಕ ಬಳಕೆಗೆ ಒತ್ತು ನೀಡುವಂತೆ ಮಾಡಿರುವುದು.
ಏರಿಯೇಟರ್‍ಗಳ ಬಳಕೆಯನ್ನು ಕಡ್ಡಾಯಗೊಳಿಸಿರುವುದು, 23 ಕೆರೆಗಳಲ್ಲಿ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿರುವುದು, 1700 ಮಿನಿ ಟ್ಯಾಂಕರ್‍ಗಳ ಮೂಲಕ ಕೊಳಚೆ ಪ್ರದೇಶಗಳಿಗೆ ಉಚಿತ ನೀರು, ಐಟಿ ಕಾರಿಡಾರ್‍ಗಳಿಗೆ ಝೀರೋ ಬ್ಯಾಕ್ಟಿರಿಯಾ ನೀರು ಪೂರೈಕೆ, ಸಂಸ್ಕರಿಸಿದ ನೀರಿನ ಬಳಕೆಗೆ ಉತ್ತೇಜನ.
ಐಐಎಸ್‍ಸ್ಸಿ ವಿಜ್ಞಾನಿಗಳ ಜೊತೆಗೂಡಿ ಅಂತರ್ಜಲ ಟಾಸ್ಕ್ ಫೋರ್ಸ್ ರಚನೆ, ಐಓಟಿ ತಂತ್ರಜ್ಞಾನದ ಮೂಲಕ ಕೊಳವೆ ಬಾವಿಗಳ ನಿರ್ವಹಣೆ. 10 ಲಕ್ಷ ಏರಿಯೇಟರ್‍ಗಳ ಅಳವಡಿಕೆ. 3 ಸಾವಿರ ಮಳೆನೀರು ಇಂಗುಗುಂಡಿಗಳ ನಿರ್ಮಾಣ ಸೇರಿದಂತೆ ಹಲವಾರು ಸುಸ್ಥಿರ ಯೋಜನೆಗಳ ಅನುಷ್ಠಾನ ಈ ಪ್ರಶಸ್ತಿ ದೊರಕಲು ಕಾರಣವಾಗಿದೆ.
ಈಗಾಗಲೇ, ಬೆಂಗಳೂರು ಜಲಮಂಡಳಿ, ಪ್ರತಿಷ್ಠಿತ ಸಿಐಐ ಐಜಿಬಿಸಿ ಗ್ರೀನ್ ಐಜಿಬಿಸಿ ಗ್ರೀನ್ ಪ್ರಾಜೆಕ್ಟ್ 2024 ಪ್ರಶಸ್ತಿ, ದೇಶದಲ್ಲೇ ಮೊದಲ ಬಾರಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಪ್ರಮಾಣ ಪತ್ರ, ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಸಮಾವೇಶದಲ್ಲಿ ಬೆಂಗಳೂರು ಮಾದರಿ ನೀರು ನಿರ್ವಹಣೆಯ ಶ್ಲಾಘನೆ, ಎಸ್‍ಟಿಪಿಗಳ ಗುಣಮಟ್ಟದ ಕಾರ್ಯವೈಖರಿಗೆ ಕೇಂದ್ರ ಸರಕಾರ ಶ್ಲಾಘನೆ ಹಾಗೂ ಕೇಂದ್ರ ಸರಕಾರದ ಜಲ್ ಹಿ ಅಮೃತ್ ಸ್ಪರ್ಧೆಯಲ್ಲಿ ನೂರು ಕೋಟಿ ರೂ.ಬಹುಮಾನ ದೊರೆತಿದೆ.
ವರ್ಲ್ಡ್ ವಾಟರ್ 2025 ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಬೆಂಗಳೂರು ಜಲಮಂಡಳಿ ಮತ್ತೊಂದು ಪ್ರಮುಖ ಸಾಧನೆಯ ಮೈಲಿಗಲ್ಲನ್ನು ನೆಟ್ಟಂತಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವ ಮತ್ತು ಮಾರ್ಗದರ್ಶನಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ನಾಗರಿಕರ ಹಿತಾಸಕ್ತಿಗಳನ್ನು ಸುಸ್ಥಿರ ಯೋಜನೆಗಳ ಮೂಲಕ ಹಾಗೂ ಉತ್ಸಾಹದಿಂದ ಪೂರೈಸಲು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳು, ಸಿಬ್ಬಂದಿ ಮತ್ತು ನೌಕರರ ಬದ್ಧತೆಯನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಈ ಮನ್ನಣೆಯು ನಗರದಲ್ಲಿ ಸುಸ್ಥಿರ ನೀರಿನ ನಿರ್ವಹಣೆಯಲ್ಲಿ ನಮ್ಮ ಉತ್ತಮ ಕೆಲಸವನ್ನು ಮುಂದುವರಿಸಲು ನಮ್ಮ ತಂಡಕ್ಕೆ ಇನ್ನಷ್ಟು ಸ್ಫೂರ್ತಿ ನೀಡಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.