ಕನ್ನಡಕ್ಕೆ ಅನುವಾದಿಸಿದ ಇಂಜಿನಿಯರಿಂಗ್ ಪುಸ್ತಕಗಳನ್ನು ಬಿಡುಗಡೆ ಮಾಡಿದ‌ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

Update: 2025-04-02 00:40 IST
ಕನ್ನಡಕ್ಕೆ ಅನುವಾದಿಸಿದ ಇಂಜಿನಿಯರಿಂಗ್ ಪುಸ್ತಕಗಳನ್ನು ಬಿಡುಗಡೆ ಮಾಡಿದ‌ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
  • whatsapp icon

ಬೆಂಗಳೂರು : ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಹಾಗೂ ವಿಟಿಯು ಬೆಳಗಾವಿ ವತಿಯಿಂದ ನಗರದ ರಾಜಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕನ್ನಡಕ್ಕೆ ಅನುವಾದಿಸಿದ ಇಂಜಿನಿಯರಿಂಗ್ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ.

ಯಾವುದೇ ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಣ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಯಾವುದೇ ದೇಶವನ್ನು ನಾಗರಿಕಗೊಳಿಸಲು ಕೆಲಸ ಮಾಡುತ್ತದೆ. ಇದರ ಸ್ಪಷ್ಟ ಪರಿಣಾಮವು ಸಮಾಜ, ಸಂಸ್ಕೃತಿ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಪ್ರತಿಫಲಿಸುತ್ತದೆ ಎಂದು ಹೇಳಿದರು.

ಜರ್ಮನಿ, ಫ್ರಾನ್ಸ್, ಜಪಾನ್, ರಷ್ಯಾ ಮತ್ತು ಚೀನಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ, ಶಿಕ್ಷಣ ಮಾದ್ಯಮವು ಸಾಮಾನ್ಯವಾಗಿ ಅವರ ಮಾತೃಭಾಷೆಯಾಗಿದೆ. ಈ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲಿ ನೀಡಲಾಗುತ್ತದೆ ಎಂದರು.

ಸ್ಥಳೀಯ ಭಾಷೆಯಲ್ಲಿ ಶಿಕ್ಷಣವು ಬೌದ್ಧಿಕ ಬೆಳವಣಿಗೆ, ಸೃಜನಶೀಲತೆ ಮತ್ತು ಅರ್ಥಮಾಡಿ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮದನ್ ಮೋಹನ್ ಮಾಳವೀಯಾ ಅವರು ಜೀವನದ ಸರ್ವತೋಮುಖ ಅಭಿವೃದ್ಧಿಯು ಶಿಕ್ಷಣದ ಮೂಲ ಮಂತ್ರವಾಗಿದೆ ಎಂದಿದ್ದರು, ಅಂತಹ ಶಿಕ್ಷಣದ ವ್ಯವಸ್ಥೆ ಇರಬೇಕು. ವಿದ್ಯಾರ್ಥಿಯು ತನ್ನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಅಭಿವೃದ್ಧಿಪಡಿಸಬಹುದು ಮತ್ತು ಇದು ಅವನ ಮಾತೃಭಾಷೆಯಲ್ಲಿದ್ದಾಗ ಮಾತ್ರ ಸಾಧ್ಯ ಎಂದು ನಂಬಿದ್ದರು ಎಂದು ತಿಳಿಸಿದರು.

ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ, ಸ್ಥಳೀಯ ಭಾಷೆ ಮತ್ತು ಮಾತೃಭಾಷೆಯನ್ನು ಶಿಕ್ಷಣದ ಮುಖ್ಯ ಮಾಧ್ಯಮವನ್ನಾಗಿ ಮಾಡಲು ವಿಶೇಷ ಒತ್ತು ನೀಡಲಾಗಿದೆ. ಶಿಕ್ಷಣವನ್ನು ಹೆಚ್ಚು ಅಂತರ್ಗತ, ಪರಿಣಾಮಕಾರಿ ಮತ್ತು ಪ್ರಾಯೋಗಿಕವಾಗಿಸುವುದು ಇವರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಮತ್ತು ಇಂಜಿ ನಿಯರಿಂಗ್, ವೈದ್ಯಕೀಯ, ಕಾನೂನು ಮತ್ತು ಇತರ ತಾಂತ್ರಿಕ ಕೋರ್ಸ್ ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಯೋಜಿಸಲಾಗಿದೆ. ಈ ಯೋಜನೆಯ ಮೂಲಕ, ವಿದ್ಯಾರ್ಥಿಗಳು ತಮ್ಮ ಸ್ವಂತ ಭಾಷೆಯಲ್ಲಿ ಅಧ್ಯಯನ ಮಾಡುವ ಸೌಲಭ್ಯವನ್ನು ಒದಗಿಸುವ ಮೂಲಕ ಗುಣಮಟ್ಟ ಮತ್ತು ನವೀನತೆಯನ್ನು ಉತ್ತೇಜಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ಶ್ರೀಕರ್, ವಿಟಿಯು ಕುಲಪತಿ ಪ್ರೊಫೆಸರ್ ಎಸ್. ವಿದ್ಯಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಒದಗಿಸುವ ಮೂಲಕ, ಹೆಚ್ಚಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ತಾಂತ್ರಿಕ ವಿಷಯಗಳನ್ನು ಅರ್ಥಮಾಡಿ ಕೊಂಡಾಗ, ಅವರು ನವೀನತೆ ಮತ್ತು ಸಂಶೋಧನೆಗೆ ಕೊಡುಗೆ ನೀಡುವ ಸಾಧ್ಯತೆ ಹೆಚ್ಚಿದೆ.

-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News