ವಕ್ಫ್ ಮಸೂದೆ ವಿರುದ್ಧ ಆಕ್ರೋಶ; ಮಸೂದೆ ಹಿಂಪಡೆಯುವವರೆಗೂ ಹೋರಾಟ: ಎಸ್‌ಡಿಪಿಐ

ಬೆಂಗಳೂರು : ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರವನ್ನು ವಿರೋಧಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ನಡೆಯಿತು.
ಶುಕ್ರವಾರ ಫ್ರೀಡಂ ಪಾರ್ಕ್‌ನ ಮೈದಾನದಲ್ಲಿ ಜಮಾಯಿಸಿದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು, ವಕ್ಫ್ ಆಸ್ತಿ ಬಿಟ್ಟು ಕೊಡುವುದಿಲ್ಲ, ಸಂವಿಧಾನ ವಿರೋಧಿ ಕಾನೂನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಐದು ತಿಂಗಳುಗಳಲ್ಲಿ ನಾಲ್ಕು ಪ್ರತಿಭಟನೆ ನಡೆಸಲಾಗಿದೆ. ಎಸ್‌ಡಿಪಿಐ, ಜಾತ್ಯತೀತ ಸಂಘಟನೆಗಳಿಗೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದೆ, ಎನ್ ಡಿಎ ಸರಕಾರ ಕೇವಲ ಸಂಘ ಪರಿವಾರದ ಅಭಿಪ್ರಾಯ ಸಂಗ್ರಹಿಸಿದೆ. ಸಂವಿಧಾನದ ವಿಚಾರಧಾರೆ ಒಪ್ಪುವವರೆಲ್ಲರೂ ಈ ಮಸೂದೆಯನ್ನು ವಿರೋಧಿಸಿದ್ದಾರೆ ಎಂದರು.
ಮುಸ್ಲಿಮರ ಅಸ್ತಿತ್ವದ ಪ್ರತೀಕವಾಗಿರುವ ವಕ್ಫ್ ಆಸ್ತಿಯನ್ನು ಸರಕಾರೀಕರಣಗೊಳಿಸಲು ಮಾರಕ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಿದೆ. ದೇಶದಲ್ಲಿ ಜೀವಂತವಾಗಿರುವ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಮತ ಧ್ರುವೀಕರಣಕ್ಕಾಗಿ ಈ ಕಾರ್ಯ ಮಾಡಲು ಹೊರಟಿದೆ. ಈ ದೇಶದ ಮುಸ್ಲಿಮರು, ಈ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ಮಸೀದಿ, ಮದ್ರಸಾ, ಖಬರಸ್ತಾನ್, ದೋಚಲು ಬಿಡುವುದಿಲ್ಲ. ಈ ಮಸೂದೆಯನ್ನು ಕೇಂದ್ರ ಸರಕಾರ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ದೇವನೂರ ಪುಟ್ನಂಜಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಪ್ರಸಾದ್, ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾದ ರಿಯಾರುತ್ ಕಡಂಬು, ಅಪ್ಸರ್, ಅಕ್ರಮ್ ಮೌಲಾನ, ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹೀಮ್ ಪಟೇಲ್, ಶಾಹೀದ್ ಅಲಿ, ಅಥಾವುಲ್ಲ ಜೋಕಟ್ಟೆ, ಅಡ್ವಕೇಟ್ ವಸೀಮ್, ಆಯಿಷಾ ಬೆಂಗಳೂರು, ಮಕ್ಸದ್ ಬೆಳಗಾವಿ, ಹಾಗೂ ಬೆಂಗಳೂರು ನಾಯಕರಾದ ಜಾವೆದ್ ಆಝಮ್, ಸಲೀಂ ಅಹ್ಮದ್, ಇತರರು ಉಪಸ್ಥಿತರಿದ್ದರು.